ನ್ಯಾಯಸಮ್ಮತ ಮೀಸಲಾತಿ ಸಿಗದಿದ್ದರೆ ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ ಚಳುವಳಿ

ಕಲಬುರ್ಗಿ, ಜೂ.೨೯- ರಾಜ್ಯ ಕಾಂಗ್ರೆಸ್ ಸರ್ಕಾರವು ಒಳಮೀಸಲಾತಿ ಹೆಸರಿನಲ್ಲಿ ಬಂಜಾರಾ ಹಾಗೂ ಅಲೆಮಾರಿ ಸಮುದಾಯಕ್ಕೆ ಮಹಾಮೋಸ ಮಾಡುತ್ತಿದ್ದು, ಕೂಡಲೇ ನ್ಯಾಯಸಮ್ಮತ ಒಳಮೀಸಲಾತಿ ಕಲ್ಪಿಸದೇ ಇದ್ದಲ್ಲಿ ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ ಚಳುವಳಿಯನ್ನು ಆರಂಭಿಸಬೇಕಾಗುತ್ತದೆ ಎಂದು ಬಿಜೆಪಿ ಶಾಸಕರಾದ ಡಾ. ಚಂದ್ರು ಲಮಾಣಿಮತ್ತು ಕೃಷ್ಣಾ ನಾಯಕ್ ಅವರು ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಲಂಬಾಣಿ ಸೇರಿ ಬಂಜಾರಾ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಜನಸಂಖ್ಯೆ ಮತ್ತು ಸಾಮಾಜಿಕ ಹಿಂದುಳಿದ ಸ್ಥಿತಿ ಪರಿಗಣಿಸಿ ನ್ಯಾಯಯುತ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಹಟಾವೋ- ತಾಂಡಾ ಬಚಾವೋ ಚಳುವಳಿ ಆರಂಭಿಸಲಾಗುವುದು ಎಂದರು.
ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡುವ ಬದಲು ಸರ್ಕಾರ ಮಂಡಿಸಿರುವ ವಿಧೇಯಕದಲ್ಲಿ ಬಂಜಾರಾ(ಲAಬಾಣಿ), ಬೋವಿ, ಕೊರಮ ಮತ್ತು ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆ ಮೂಲಕ ಬಂಜಾರಾ ಸಮಾಜದ ವಿರುದ್ಧ ಸೇಡಿನ ರಾಜಕಾರಣ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಲಂಬಾಣಿ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಶೇಕಡಾ ೪ರಷ್ಟು ಮೀಸಲಾತಿ ಹಾಗೂ ಅಲೆಮಾರಿ ಸಮುದಾಯಕ್ಕೆ ಶೇಕಡಾ ೧ರಷ್ಟು ಮೀಸಲಾತಿ ನಿಗದಿಪಡಿಸಿರುವುದು ನ್ಯಾಯಸಮ್ಮತವಾಗಿಲ್ಲ. ಲಂಬಾಣಿ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಶೇಕಡಾ ೫ ಮತ್ತು ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇಕಡಾ ೧ರಷ್ಟು ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಒಳಮೀಸಲಾತಿ ಹಂಚಿಕೆ ಮಾಡಿದ್ದು, ಇದನ್ನು ಕೂಡಲೇ ಮರುಪರಿಶೀಲಿಸಿ ಅಲೆಮಾರಿ ಸಮುದಾಯವನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸಿ ನ್ಯಾಯಯುತ ಮೀಸಲಾತಿ ನೀಡಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಚಿಂಚೋಳಿ ಶಾಸಕ ಶಾಸಕ ಡಾ. ಅವಿನಾಶ್ ಜಾಧವ್, ಮಹೇಂದ್ರ ನಾಯಕ್, ಲಿಂಬ್ಯಾ ನಾಯಕ್, ಸುರೇಶ್ ಜಾಧವ್ ಮುಂತಾದವರು ಉಪಸ್ಥಿತರಿದ್ದರು.



