ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಕನಿಷ್ಠ ೨೦೦ ದಿನಗಳ ಕೆಲಸ, ಬರಗಾಲದ ಕಾಮಗಾರಿ ಆರಂಭಿಸಲು ಒತ್ತಾಯ

ಕಲಬುರಗಿ, ನ. ೪: ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ೨೦೦ ದಿನಗಳ ಕೆಲಸ ಒದಗಿಸಬೇಕು, ಬಾಕಿ ವೇತನ ಪಾವತಿಸಬೇಕು ಹಾಗೂ ಬರಗಾಲದ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕೃಷಿ ಕೂಲಿಕಾರರು ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಭು ಪ್ಯಾರಾಬದ್ದಿ, ಮಲ್ಲಮ್ಮ ಕೊಡ್ಲಿ, ಮೇಘರಾಜ್ ಕಠಾರೆ, ಸಾಬಯ್ಯ ಗುತ್ಹೇದಾರ್, ನಿಂಗಬಸಪ್ಪ ಅವಳಳ್ಳಿ, ಜಗದೇವಿ ಚಂದನಕೇರಾ, ಹಣಮಂತರಾವ್ ದೇಶಪಾಂಡೆ, ತುಳಜಪ್ಪ ರಾಮಪೂರ, ಸುನೀತಾ ಮಾದವಾರ್, ಕಾಶಿನಾಥ್ ಬಂಡಿ, ಪಡಸಾವಳಿ, ಜಗದೇವಿ ನೂಲಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿದ್ದು, ರೈತರು ಮತ್ತು ಕೃಷಿ ಕೂಲಿಕಾರರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರೂ ಬೀಜ, ರಸಗೊಬ್ಬರ ಹಾಗೂ ಇತರ ಕೃಷಿ ವೆಚ್ಚಗಳ ನಡುವೆಯೂ ಬೆಳೆಗಳು ಸಂಪೂರ್ಣ ಹಾಳಾಗಿವೆ. ದುಡಿಯಲು ಕೆಲಸವಿಲ್ಲದೆ ಕೃಷಿ ಕೂಲಿಕಾರರು ಉಪವಾಸ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕೂಲಿಕಾರರಿಗೆ ದಿನಕ್ಕೆ ₹೧೫೦ರಿಂದ ₹೨೫೦ರವರೆಗೆ ವೇತನ ನೀಡಬೇಕಿದ್ದರೂ, ಎನ್ಎಂಆರ್ನಲ್ಲಿ ಕಡಿಮೆ ಮೊತ್ತ ದಾಖಲಿಸಿ ವಂಚಿಸಲಾಗುತ್ತಿದೆ. ಅಲ್ಲದೆ, ನಿಗದಿತ ಸಮಯಕ್ಕೆ ವೇತನ ಪಾವತಿಯಾಗದೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ೧೨೫ ದಿನಗಳ ಕೆಲಸ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಕೆಲಸವಿಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ. ಆದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ೨೦೦ ದಿನಗಳ ಕೆಲಸ ಒದಗಿಸಬೇಕು. ವಾರಕ್ಕೊಮ್ಮೆ ಕೂಲಿ ಪಾವತಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿ ಗ್ರಾಮದಲ್ಲಿಯೂ ೨೦೦ ದಿನಗಳ ಕೆಲಸ ಪೂರ್ಣಗೊಂಡ ಬಳಿಕ ಬರಗಾಲ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಕೂಲಿಗಾಗಿ ಕಾಳು ಯೋಜನೆ ಜಾರಿಗೊಳಿಸಬೇಕು ಹಾಗೂ ಈಗಾಗಲೇ ಬಾಕಿ ಉಳಿದಿರುವ ವೇತನವನ್ನು ತಕ್ಷಣ ಪಾವತಿಸಬೇಕು. ಕೂಲಿಕಾರರು ನಮೂನೆ–೬ ಸಲ್ಲಿಸಿದ ಮೂರು ದಿನಗಳೊಳಗೆ ಕೆಲಸ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.


