ಜಿಲ್ಲಾಸುದ್ದಿ

ಸೇತುವೆ ಕೆಳಗೆ ಬಿದ್ದ ಖಾಸಗಿ ಶಾಲಾ ಬಸ್: 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬೀದರ್, ಅ.6: ಸಣ್ಣ ಸೇತುವೆಯ ಮೇಲಿನಿಂದ ಖಾಸಗಿ ಶಾಲಾ ಬಸ್ಸೊಂದು ಕೆಳಗೆ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಹುಲಸೂರು ತಾಲ್ಲೂಕಿನ ಹಾಲಹಳ್ಳಿ ಸಮೀಪ ನಡೆದಿದೆ.

ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಪಘಾತದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್ಸಿನಲ್ಲಿ ಗೋಠಾ, ಮುಚಳಂಬಾ, ರಾಚಪ್ಪಗೌಡಗಾಂವ, ಜಾಲಹಳ್ಳಿ, ಕೇಸರ ಜವಳಗಾ ಹಾಗೂ ತೊಗಲೂರು ಗ್ರಾಮಗಳ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಅಪಘಾತದ ಬಳಿಕ ಗಾಯಗೊಂಡ ಕೆಲ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ಕೆಲವರನ್ನು ಪಾಲಕರು ನೀಲಂಗಾ, ಸೊಲ್ಲಾಪುರ, ಉಮರ್ಗಾ, ಜಿಲ್ಲಾ ಕೇಂದ್ರ ಆಸ್ಪತ್ರೆ, ಬಸವಕಲ್ಯಾಣ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

ಚಾಲಕನ ನಿರ್ಲಕ್ಷ್ಯ ಆರೋಪ

ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಶಾಸಕ ಶರಣು ಸಲಗರ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಘಟನಾ ಸ್ಥಳಕ್ಕೆ ಸಿಪಿಐ ಅಲ್ಲಿಸಾಬ್, ಪಿಎಸ್‌ಐ ಶಿವಪ್ಪ ಮೇಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button