ಜಿಲ್ಲಾಸುದ್ದಿ

ರಕ್ತದಾನದ ಮೂಲಕ ಸಮಾಜಕ್ಕೆ ಯುವಕರು ಕೊಡುಗೆ ನೀಡಿ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ, ಅ.3- ರಕ್ತದಾನವು ಮಾನವೀಯ ಸೇವೆಯ ಜೊತೆಗೆ ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಕರೆ ನೀಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಇಎಸ್‌ಐ ಆಸ್ಪತ್ರೆಯ ಸಹಯೋಗದಲ್ಲಿ ರಾಷ್ಟ್ರೀಯ ರಕ್ತದಾನ ದಿನದ ಅಂಗವಾಗಿ ವಿಶ್ವವಿದ್ಯಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಜನರು ರಕ್ತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಗತ್ಯವಿರುವ ರೋಗಿಗಳಿಗೆ ನೆರವಾಗಬೇಕು. ರಕ್ತದಾನ ಮಾಡುವುದರಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವುದರ ಜೊತೆಗೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಇಎಸ್‌ಐ ಆಸ್ಪತ್ರೆಯ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅಬ್ದುಲ್ ಹಕೀಂ ಅತ್ತಾರ್ ಮಾತನಾಡಿ, ಒಂದು ಘಟಕ ರಕ್ತದಾನ ಮಾಡುವುದರಿಂದ ಅದರ ವಿವಿಧ ಘಟಕಗಳ ಮೂಲಕ ಮೂವರು ರೋಗಿಗಳಿಗೆ ನೆರವಾಗಬಹುದು. ಹೀಗಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ಸುಮಾರು 1.5 ಕೋಟಿ ಘಟಕ ರಕ್ತದ ಅಗತ್ಯವಿದೆ. ಆದರೆ ಪ್ರಸ್ತುತ ಸುಮಾರು 1.2 ಕೋಟಿ ಘಟಕಗಳಷ್ಟು ಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಅಗತ್ಯ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಗ್ರಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಹೇಳಿದರು.

ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದರ ಜೊತೆಗೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಘು ಅಕಮಂಚಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುಲಪತಿ ಸೇರಿದಂತೆ ವಿದ್ಯಾರ್ಥಿಗಳು ರಕ್ತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಡಾ. ಡಿ. ರಂಗನಾಥ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರದ ವೈದ್ಯ ಡಾ. ರೋಹಿತ್ ಕುಮಾರ್ ವಂದಿಸಿದರು.

ಪ್ರೊ. ಆರ್.ಎಸ್. ಹೆಗಡೆ, ಡಾ. ಬುರೇಡಿ, ಸಹಾಯಕ ಕುಲಸಚಿವ ಸುನೀಲ್ ಜಿ., ಡಾ. ಚರಣ್ ಕುಮಾರ್, ಶಿವಕುಮಾರ್ ಸಿರಿಗೇರಿ, ಇಎಸ್‌ಐ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button