ಜಿಲ್ಲಾಸುದ್ದಿ

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕೇಂದ್ರವಾಗಿದ್ದ ಡಾ. ಅಪ್ಪ: ಪ್ರೊ. ಚವಾಣ್

ಕಲಬುರಗಿ, ಸೆ.18: ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳ ಬಾಳಿಗೆ ಸಂಜೀವಿನಿಯಾಗಿದ್ದವರು ಡಾ. ಶರಣಬಸವಪ್ಪ ಅಪ್ಪ. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯ ಎಂದು ಗೋದುತಾಯಿ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಿ.ಸಿ. ಚವಾಣ್ ಹೇಳಿದರು.

ನಗರದ ಗೋದುತಾಯಿ ಬಿ.ಎಡ್. ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಡಾ. ಶರಣಬಸವಪ್ಪ ಅಪ್ಪ ಅವರ ಜೀವನ ದರ್ಶನ’ ಮಾಸಿಕ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಲಿಂ. ದೊಡ್ಡಪ್ಪ ಅಪ್ಪ ಅವರು ಹಚ್ಚಿದ ಶಿಕ್ಷಣದ ಸಸಿಯನ್ನು ಡಾ. ಅಪ್ಪ ಅವರು ಹೆಮ್ಮರವಾಗಿ ಬೆಳೆಸಿ, ಈ ಭಾಗದ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಬೆಳಗುವಂತೆ ಮಾಡಿದ್ದಾರೆ ಎಂದರು.

ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ನೀಡಿದ ಡಾ. ಅಪ್ಪ ಅವರು, ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಮತ್ತು ಹಿಂದುಳಿದವರ ಪಟ್ಟಿಯನ್ನು ಅಳಿಸಬೇಕು ಎಂಬ ಆಶಯದಿಂದ ಹಗಲಿರುಳು ಶ್ರಮಿಸಿದರು. ಪೂಜ್ಯರು ತೋರಿದ ದಾರಿಯಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯೆ ಡಾ. ಭುವನೇಶ್ವರಿ ಚಿಮ್ಮಕೋಡ, ಪೂಜ್ಯ ಡಾ. ಅಪ್ಪ ಅವರು ಅನ್ನ ಮತ್ತು ಅಕ್ಷರ ಎರಡನ್ನೂ ಸಮಾನವಾಗಿ ದಾಸೋಹಗೈದು ಸಮಾಜವನ್ನು ಉನ್ನತಿಗೆ ಕೊಂಡೊಯ್ದಿದ್ದಾರೆ. ಶಿಕ್ಷಣ, ಸಮಾಜ ಸೇವೆ, ಮಾನವೀಯತೆ, ದಾಸೋಹ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ತಿಳಿಸಿ, ತಮ್ಮ ಜೀವನದಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಪೋಲಿಸಪಾಟೀಲ ಮಾತನಾಡಿ, ಈ ಭಾಗಕ್ಕೆ ಪೂಜ್ಯರ ಕೊಡುಗೆಗಳು ಲೆಕ್ಕವಿಲ್ಲದಷ್ಟು. ಅಕ್ಷರ ದಾಸೋಹದ ಮೂಲಕ ಅನೇಕ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂದು ಮಾರ್ಗದರ್ಶನ ನೀಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಕಲ್ಪನಾ ಭೀಮಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಸುಪ್ರಿಯಾ ನಾಗಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button