ನಾರಾಯಣ ಗುರು ಮಹಾನ್ ಸಮಾಜ ಸುಧಾರಕರು: ಕಾಶಿನಾಥ ಗುತ್ತೇದಾರ

ಚಿತ್ತಾಪುರ, ಸೆ.13: ‘ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಂದೇ ದೇವರು’ ಎಂಬ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಅವರು ಮಹಾನ್ ಸಮಾಜ ಸುಧಾರಕರು ಎಂದು ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ, ಸಾಂಸ್ಕೃತಿಕ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾರಾಯಣ ಗುರು ಅವರು ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರ ಹಾಗೂ ಅನಾಚಾರಗಳ ವಿರುದ್ಧ ಮೌನ ಕ್ರಾಂತಿಯ ಮೂಲಕ ಹೋರಾಟ ನಡೆಸಿದರು. ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲದ ಸಂದರ್ಭದಲ್ಲಿ ತಾವೇ ದೇವಾಲಯಗಳನ್ನು ನಿರ್ಮಿಸಿ ಎಲ್ಲ ವರ್ಗದ ಜನರಿಗೂ ಪೂಜೆಯ ಹಕ್ಕು ದೊರೆಯುವಂತೆ ಮಾಡಿದ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು ಎಂದು ಹೇಳಿದರು.
ಪ್ರಾಂಶುಪಾಲ ಡಾ. ಪದ್ಮಣ್ಣ ರಾಸಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾರಾಯಣ ಗುರು ಅವರು ಭಾರತದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು. ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಅವರು ಸಮಾಜದ ಎಲ್ಲರಿಗೂ ಸಮಾನತೆ, ಸ್ವಾಭಿಮಾನ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಹಿಣಿ ಕಲ್ಮಠ, ಡಾ. ಜ್ಯೋತಿ ಕುಲಕರ್ಣಿ, ಡಾ. ವಿಲಾಸ, ಡಾ. ನಾಗವೇಣಿ, ಭಾಗ್ಯಶ್ರೀ ಠಾಕೂರ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮಲ್ಲಪ್ಪ ಎಸ್. ತೊಟ್ನಳ್ಳಿ ಸ್ವಾಗತಿಸಿದರು. ಡಾ. ಸೂಗುರೇಶ್ವರ ಪ್ರಾರ್ಥಿಸಿದರು. ಮರಿಯಪ್ಪ ಮೇತ್ರಿ ನಿರೂಪಿಸಿದರು. ಶರಣಪ್ಪ ದಿಗಾಂವ ವಂದಿಸಿದರು.



