ಜಿಲ್ಲಾಸುದ್ದಿ

ಬೀದರ್‌ನಲ್ಲಿ ಕೃಷ್ಣ ಮುಖೇಡಕರ್‌ಗೆ ‘ಸ್ವರ ವೈಭವ’ ಸಮ್ಮಾನ

ಬೀದರ್, ನ.9: ತಮ್ಮ ವಿಶಿಷ್ಟ ಗಾಯನ ಶೈಲಿಯ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೀದರ್‌ನ ಹೆಮ್ಮೆಯ ಶಾಸ್ತ್ರೀಯ ಸಂಗೀತಗಾರ ಕೃಷ್ಣ ಮುಖೇಡಕರ್ ಅವರಿಗೆ ಸಂಗೀತ ಕಲಾ ಮಂಡಳಿಯ ವತಿಯಿಂದ ‘ಸ್ವರ ವೈಭವ’ ಸಮ್ಮಾನ ಪ್ರದಾನ ಮಾಡಲಾಗುತ್ತಿದೆ.

ಈ ನಿಮಿತ್ತ ನವೆಂಬರ್ 13ರಂದು ಸಂಜೆ 5 ಗಂಟೆಗೆ ನಗರದ ಪೂಜ್ಯ ಡಾ. ಚೆನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ವಿಶೇಷ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ನಿವೃತ್ತ ಶಿಕ್ಷಕ ಶಿವಶರಣಪ್ಪ ಕಮಠಾಣೆ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ಮುಖೇಡಕರ್ ಅವರು ತಮ್ಮ ಮೊದಲ ಸಂಗೀತ ಗುರುಗಳಾದ ಬೀದರ್‌ನ ಪಂಡಿತ್ ರಾಮಲು ಗಾದಗಿ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಆರಂಭಿಸಿದರು. ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ ಎಂದರು.

ರಾಷ್ಟ್ರಮಟ್ಟದ ಪ್ರತಿಷ್ಠಿತ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಗೆ ವಿದ್ಯಾರ್ಥಿವೇತನದೊಂದಿಗೆ ಆಯ್ಕೆಯಾಗಿದ್ದ ಅವರು, ಬೆಂಗಳೂರಿನ ಡಾ. ನರಸಿಂಹಲು ವಡವಾಟಿ, ಕೋಲ್ಕತ್ತಾದ ಪದ್ಮಶ್ರೀ ಪಂಡಿತ್ ಉಲ್ಲಾಸ್ ಕಶಾಲ್ಕರ್ ಹಾಗೂ ಪದ್ಮವಿಭೂಷಣ ಡಾ. ಗಿರಿಜಾದೇವಿ ಸೇರಿದಂತೆ ಹಲವು ಸಂಗೀತ ದಿಗ್ಗಜರಿಂದ ಉನ್ನತ ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಸಾಂಗ್ಲಿಯ ಸಂಗೀತಾಚಾರ್ಯ ಪಂಡಿತ್ ಡಿ.ವಿ. ಕಣಬುವಾ ಪ್ರತಿಷ್ಠಾನದ ಗುರುಕುಲದಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2023ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ಜ್ಯೂರಿಚ್, ಜಿನೀವಾ ಮತ್ತು ಟ್ರೋಗನ್ ಸೇರಿದಂತೆ ಮೂರು ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರೆ.

ಇದಲ್ಲದೆ, 2026ರ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 25ರವರೆಗೆ ಅಮೆರಿಕದ ಸ್ಯಾನ್ ಡಿಯಾಗೋ, ಲಾಸ್ ಏಂಜಲೀಸ್, ಸ್ಯಾನ್ ಜೋಸ್, ನ್ಯೂಜೆರ್ಸಿ, ರಾಲಿ, ನಾರ್ಫೋಕ್, ಕನೆಕ್ಟಿಕಟ್ ಮತ್ತು ಬೋಸ್ಟನ್ ಸೇರಿದಂತೆ ವಿವಿಧೆಡೆ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ವಿದೇಶಿ ಸಂಗೀತಾಸಕ್ತರ ಮೆಚ್ಚುಗೆ ಗಳಿಸಿದ್ದಾರೆ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ (ಐಪಿಎಸ್) ಉದ್ಘಾಟಿಸಲಿದ್ದಾರೆ. ಉತ್ತರ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಕಲಬುರಗಿ ವಿಭಾಗದ ಸಹಪ್ರಭಾರಿ ಈಶ್ವರಸಿಂಗ್ ಠಾಕೂರ್, ಹಿರಿಯ ಸಂಗೀತ ವಿದ್ವಾಂಸ ಪಂಡಿತ್ ರಾಮಲು ಗಾದಗಿ, ಸಂಗೀತಗಾರ ರಾಜೇಂದ್ರ ಸಿಂಗ್ ಪವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬೀದರ್ ಜಿಲ್ಲಾಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ, ಹಿರಿಯ ಪತ್ರಕರ್ತ ಸದಾನಂದ ಜೋಶಿ ಹಾಗೂ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಪಾಲ್ಗೊಳ್ಳಲಿದ್ದಾರೆ.

ಸಂಗೀತ ಕಲಾ ಮಂಡಳಿಯ ಕಾರ್ಯದರ್ಶಿ ಎಸ್.ಆರ್. ಸಂಗಮಕರ, ಉಪಾಧ್ಯಕ್ಷ ರಮೇಶ ಗೋಯಲ್ ಹಾಗೂ ಅಧ್ಯಕ್ಷ ರಾಜೇಂದ್ರ ಸಿಂಗ್ ಪವಾರ್ ಸೇರಿದಂತೆ ಮಂಡಳಿಯ ಎಲ್ಲ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಜಿಲ್ಲೆಯ ಸಂಗೀತಾಸಕ್ತರು, ಕಲಾಭಿಮಾನಿಗಳು, ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಿವಶರಣಪ್ಪ ಕಮಠಾಣೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಸಿಂಗ್ ಪವಾರ್, ಎಸ್.ವಿ. ಕಲ್ಮಠ, ಪ್ರೊ. ಜಗನ್ನಾಥ ಹೆಬ್ಬಾಳೆ, ಜಗದೀಶ ಮುಖೇಡಕರ್, ರೇವಣಸಿದ್ಧಪ್ಪ ಜಲಾದೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button