ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲರ ಬೂಟಾಟಿಕೆ: ರೇವೂರ್ ಆಕ್ರೋಶ
ರೈತರ ಬೆಳೆಹಾನಿ, ಭೂಸ್ವಾಧೀನ ಪರಿಹಾರ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕ ಅಲ್ಲಮಪ್ರಭು ಪಾಟೀಲರನ್ನು ರೇವೂರ್ ಪ್ರಶ್ನೆ

ಕಲಬುರಗಿ, ಆ.25- ಮಳೆಗಾಲದ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ರೈತರ ಬೆಳೆಹಾನಿ ಕುರಿತು ಚರ್ಚಿಸಲು ವಿರೋಧ ಪಕ್ಷದವರಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮನವಿ ಮಾಡಿರುವುದು ಕೇವಲ ರಾಜಕೀಯ ಬೂಟಾಟಿಕೆಯಾಗಿದೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಮಪ್ರಭು ಪಾಟೀಲ ಅವರ ನಡೆ ರೈತಪರ ಕಾಳಜಿಯನ್ನು ತೋರಿಸುತ್ತಿಲ್ಲ. ರಾಜ್ಯದ ರೈತರ ಬಗ್ಗೆ ಕಾಳಜಿ ತೋರುವವರು ತಮ್ಮ ಕ್ಷೇತ್ರದ ರೈತರ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕು. ತಮ್ಮ ಕ್ಷೇತ್ರದ ರೈತರ ಬಗ್ಗೆ ಕಾಳಜಿ ಇಲ್ಲದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರೈತರಿಗೆ ಸರ್ಕಾರದಿಂದ ಸಮರ್ಪಕ ನೆರವು ದೊರೆಯುತ್ತಿಲ್ಲ. ಕಳೆದ ವರ್ಷದ ಬೆಳೆ ವಿಮೆಯ ಹಣವೂ ರೈತರಿಗೆ ಸಮರ್ಪಕವಾಗಿ ತಲುಪಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಮಪ್ರಭು ಪಾಟೀಲ ಅವರು ತಮ್ಮ ಅವಧಿಯಲ್ಲಿ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಎಷ್ಟು ಕೊಳವೆಬಾವಿಗಳನ್ನು ಮಂಜೂರು ಮಾಡಿಸಿ, ಮೋಟಾರ್‌ಗಳನ್ನು ಅಳವಡಿಸಿ ರೈತರ ಬೆಳೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ? ಎಂಬುದನ್ನು ಬಹಿರಂಗಪಡಿಸಲಿ ಎಂದು ರೇವೂರ್ ಸವಾಲು ಹಾಕಿದರು.
ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಗ್ರಾಮಗಳಲ್ಲಿ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಬೆಣ್ಣೆತೊರಾ ಬ್ಯಾರೇಜ್‌ನಿಂದ ಸುಮಾರು 200 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಕ್ಷೇತ್ರದ ರೈತರ ಬಗ್ಗೆ ಶಾಸಕರಿಗೆ ಇರುವ ನಿರ್ಲಕ್ಷ್ಯ ಸ್ಪಷ್ಟವಾಗುತ್ತದೆ ಎಂದು ಅವರು ದೂರಿದರು.
ರೈತರ ಭೂಸ್ವಾಧೀನ ಪರಿಹಾರ ಪಾವತಿಗೆ ಆಗ್ರಹ
ಧರಿಯಾಪುರ-ಕೋಟನೂರಿನಲ್ಲಿ ಅಟಲ್ ಜಿ ಲೇಔಟ್ ಬಡಾವಣೆ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂಸ್ವಾಧೀನಪಡಿಸಿಕೊಂಡ ರೈತರ ಜಮೀನಿಗೆ ಕಾಂಗ್ರೆಸ್ ಸರ್ಕಾರ ಇದುವರೆಗೂ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ರೇವೂರ್ ಆರೋಪಿಸಿದರು.
ಲಭ್ಯ ಮಾಹಿತಿಯ ಪ್ರಕಾರ ಸುಮಾರು 26 ರೈತರಿಂದ 150 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದಕ್ಕಾಗಿ ಸುಮಾರು 293 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. ಈ ಪೈಕಿ ಇದುವರೆಗೆ ರೈತರಿಗೆ ಎಷ್ಟು ಪರಿಹಾರ ಹಣ ಪಾವತಿಸಲಾಗಿದೆ ಎಂಬುದನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೂ ಜಪ್ತಿ ಆದೇಶ ಹೊರಡಿಸಿರುವುದು ತಮ್ಮ ಗಮನಕ್ಕೆ ಬಂದಿದೆ. ಕ್ಷೇತ್ರದ ರೈತರಿಂದ ಭೂಮಿ ಪಡೆದುಕೊಂಡು ಅವರಿಗೆ ಪರಿಹಾರ ನೀಡಲು ವಿಫಲರಾಗಿರುವ ಶಾಸಕರು ವಿಧಾನಸಭೆಯಲ್ಲಿ ರೈತರ ಬಗ್ಗೆ ಚರ್ಚೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ರೇವೂರ್ ಟೀಕಿಸಿದರು.
ಇದೇ ವೇಳೆ ಮಹಾನಗರ ಪಾಲಿಕೆಯ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ನಡೆದು ಸುಮಾರು ಒಂಬತ್ತು ತಿಂಗಳು ಕಳೆದಿದ್ದರೂ ಕಾಮಗಾರಿಗಳು ಆರಂಭವಾಗಿಲ್ಲ. ಈ ಕುರಿತು ಕೂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ದಯಾಘನ್ ಧಾರವಾಡಕರ್, ಅವಿನಾಶ್ ಕುಲಕರ್ಣಿ, ಮಾಜಿ ಮೇಯರ್ ವಿಶಾಲ್ ದರ್ಗಿ, ಶಿವಯೋಗಿ ನಾಗನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



