ಜಿಲ್ಲಾಸುದ್ದಿ

ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಕರ ಜವಾಬ್ದಾರಿ ದೊಡ್ಡದು: ಮೂಲಗೆ

ಕಲಬುರಗಿ, ಅ.3- ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಮೇಲೆ ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ಜವಾಬ್ದಾರಿ ಇದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಹೃದಯಾಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳಲ್ಲಿ ನೆಲ, ಜಲ ಹಾಗೂ ದೇಶಪ್ರೇಮದ ಕುರಿತು ಅರಿವು ಮೂಡಿಸಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪರಿಷತ್ ವತಿಯಿಂದ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸತ್ಕಾರ ಸಂಭ್ರಮ ಆಯೋಜಿಸುವ ಮೂಲಕ ಅವರಲ್ಲಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವ ಮನೋಭಾವ ಬೆಳೆಸುವ ಹಾಗೂ ಹೊಸ ಪೀಳಿಗೆಯ ಭವಿಷ್ಯವನ್ನು ಇನ್ನಷ್ಟು ಉತ್ತಮವಾಗಿ ರೂಪಿಸುವ ಚೈತನ್ಯ ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು.

ಜ್ಞಾನಧಾರೆ ಎರೆದ ಗುರುಗಳಿಗೆ ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದಲ್ಲಿ ಗುರುಸ್ಥಾನಕ್ಕಿರುವ ಗೌರವವನ್ನು ಮತ್ತಷ್ಟು ಎತ್ತಿ ತೋರಿಸುವ ಕೆಲಸ ಇದಾಗಿದೆ ಎಂದು ಹೇಳಿದರು.

ಪರಿಷತ್ ಚುನಾವಣೆಗೆ ನಡೆಸುವ ಕಾರ್ಯಕ್ರಮಗಳಿಗಾಗಿ ಈ ಚಟುವಟಿಕೆಗಳನ್ನು ಆಯೋಜಿಸಿಲ್ಲ. ಸಮಾಜ ಸದಾ ಜಾಗೃತಿಯಿಂದ ಕೂಡಿರಬೇಕು ಎಂಬ ಸದುದ್ದೇಶದಿಂದ ವರ್ಷವಿಡೀ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜಿಲ್ಲೆಯಲ್ಲಿ ಒಂದು ಸಂಚಲನ ಮೂಡಿಸಲಾಗಿದೆ. ಜಿಲ್ಲೆಯ ಜನತೆಯಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿರುವುದರಿಂದ ನಮ್ಮಲ್ಲಿ ಹೆಮ್ಮೆಯ ಭಾವನೆ ಮೂಡಿದೆ ಎಂದು ವಿಜಯಕುಮಾರ ಪಾಟೀಲ ತಿಳಿಸಿದರು.

ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ಗುಣಾತ್ಮಕ ಶಿಕ್ಷಣ ಬೋಧಿಸುವ ಮೂಲಕ ನಾಡಿನ ಉತ್ತಮ ನಾಗರಿಕರನ್ನು ರೂಪಿಸಬೇಕು. ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿ ಶಿಕ್ಷಕರ ವೃತ್ತಿಗೌರವವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ನ್ಯಾಯವಾದಿ ಆರತಿ ತಿವಾರಿ ಮಾತನಾಡಿ, ಏನಾದರೂ ಬದಲಾವಣೆ ಆಗಬೇಕಾದರೆ ಅದು ಶಿಕ್ಷಕರಿಂದಲೇ ಸಾಧ್ಯ. ಎಲ್ಲ ಕ್ಷೇತ್ರಗಳಿಗಿಂತ ಶಿಕ್ಷಣಕ್ಕೆ ಹೆಚ್ಚಿನ ಗೌರವವಿದೆ. ಮಕ್ಕಳ ಸಾಧನೆಯ ಹಿಂದೆ ಗುರುವಿನ ಸ್ಥಾನ ಹಿರಿದಾಗಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಹೊಣೆಗಾರಿಕೆ ಹೆಚ್ಚಿದೆ ಎಂದು ಹೇಳಿದರು.

ಸಾಹಿತಿ ಮುಡಬಿ ಗುಂಡೇರಾವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಭೋಜನಗೌಡ ಪಾಟೀಲ, ಯುವ ಮುಖಂಡ ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಸಿದ್ಧಲಿಂಗ ಬಾಳಿ ಸೇರಿದಂತೆ ಹಲವರು ಮಾತನಾಡಿದರು.

ಪರಿಷತ್ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೇಂದ್ರ ಪ್ರತಿನಿಧಿ ಸೈಯ್ಯದ್ ನಜರುದ್ದೀನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀ ಪಾಟೀಲ, ಅಪ್ಪಯ್ಯ ಹಿರೇಮಠ, ಅಂಬುಜಾ ದೇಶಪಾಂಡೆ, ಸೋಮಶೇಖರ ಹಿರೇಮಠ, ವಾಹಾಬ್ ಪಟೇಲ್, ಸಂಗೀತಾ ಠಾಕೂರ್, ರಾಜಶೇಖರ ಶ್ರೀಮಂತ, ಹನುಮಂತ ರೆಡ್ಡಿ, ರಾಘವಾಚಾರ್ಯ ಜೋಶಿ, ಚೆನ್ನಮ್ಮ ಗುಣಾರಿ, ಚಂದ್ರಕಾಂತ ಬಬಲಾದಕರ್, ಮಹಾದೇವ ಗುಣಕಿ, ದಶರಥ ಅಂಟಾವರ, ಸಂಗ್ರಾಮ್ ಉಚ್ಛೇದ್, ಶಂಕರ ಭಾವಿಮನಿ, ರಾಧಿಕಾ ಹೊಸೂರ, ಪರಮೇಶ್ವರ ಕುಂಬಾರ, ನಿಂಗಪ್ಪ ಪೂಜಾರಿ, ಸರಸ್ವತಿ ಲಚ್ಛಾಣ, ಸೂರ್ಯಕಾಂತ ನಿಂಬರ್ಗಾ, ಸಿದ್ದಪ್ಪ ಹೂಗಾರ, ಅನಿತಾ ಕಾಂಬಳೆ ಹಾಗೂ ವಿಜಯಕುಮಾರ ಕೊಲಕುಂದಾ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button