ರಾಜ್ಯ

ಶಿರಪುರ ಮಾದರಿಯಲ್ಲಿ ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಒತ್ತು

224 ವಿಧಾನಸಭಾ ಕ್ಷೇತ್ರಗಳಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಶೀಘ್ರದಲ್ಲೇ ಡ್ಯಾಶ್‌ಬೋರ್ಡ್ – ಡಾ. ಅಜಯ್ ಸಿಂಗ್

ಕಲಬುರಗಿ,ಆ.23-ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ ಯೋಜನೆ, ಬ್ರಿಡ್ಜ್ ಕಮ್ ಬ್ಯಾರೇಜ್, ಸರಣಿ ಚೆಕ್ ಡ್ಯಾಂ, ಗೋಕಟ್ಟಾ ನಿರ್ಮಾಣ ಹೀಗೆ ಮಹಾರಾಷ್ಟçದ ಶಿರಪೂರ ಮಾದರಿಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.

ರವಿವಾರ ಇಲ್ಲಿನ ಕೆ.ಕೆ.ಆರ್.ಡಿ.ಬಿ ಮಂಡಳಿ ಸಭಾಂಗಣದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿನ ಅಂತರ್ಜಲ ಹೆಚ್ಚಳಕ್ಕೆ ಏನೆಲ್ಲ ಯೋಜನೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನ ಪರತಿಬಿಂಬಿಸುವ ಶೀಘ್ರದಲ್ಲಿಯೇ ಡ್ಯಾಶ್ ಬೋರ್ಡ್ ತೆರೆಯಲಾಗುತ್ತದೆ. ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಯಾವ ರೀತಿಯ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂಬುದನ್ನು ವಿವರಿಸಲಾಗುತ್ತದೆ ಎಂದರು.

ಸಣ್ಣ ನೀರಾವರಿ ಇಲಾಖೆಗೆ ಪ್ರಸಕ್ತ 2026-27ನೇ ಸಾಲಿಗೆ ಒಟ್ಟು 3,333 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದಾದ್ಯಂತ ಸಣ್ಣ ನೀರಾವರಿ ಇಲಾಖೆ ಅಧೀನದ 3,810 ಕೆರೆಗಳ ಪೈಕಿ 925 ಕೆರೆಗಳನ್ನು ನೀರು ತುಂಬಿಸುವ ಯೋಜನೆ ಹಾಕಿಕೊಂಡಿದ್ದೇವೆ. ಕಳೆದ 2024-25 ಮತ್ತು 2025-26ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ 9,829 ಮತ್ತು ಗಿರಿಜನ ಉಪ ಯೋಜನೆಯಡಿ 6,165 ರೈತರಿಗೆ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಒದಗಿಸಿ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇದಲ್ಲದೆ 687 ಬ್ಯಾರೇಜ್ ಮತ್ತು ಚೆಕ್ ಡ್ಯಾಂ, ಕಿಂಡಿ ಆಣೆಕಟ್ಟು ನಿರ್ಮಿಸಿ 40,316 ಹೆಕಟೇರ್ ಪ್ರದೇಶಕ್ಕೆ ನೀರುಣಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದು ಅಜಯ್ ಸಿಂಗ್ ತಿಳಿಸಿದರು.

ಪ್ರಸಕ್ತ ವರ್ಷ ರಾಜ್ಯದಲ್ಲಿ ಸೂಪರ್ ಎಲ್ನಿನೋ ಬರದ ಛಾಯೆ ಆವರಿಸಿದೆ. ಬರದಲ್ಲಿಯೂ ಅಂತರ್ಜಲ ಸಂರಕ್ಷಣೆ ನಿಟ್ಟಿನಲ್ಲಿ ಅಂತರ್ಜಲ ನಿರ್ದೇಶನಾಲಯದಿಂದ ಅಂತರ್ಜಲ ಮಹತ್ವ ಸಾರಲು ಮಾಹಿತಿ, ಶಿಕ್ಷಣ, ಮತ್ತು ಸಂವಹನ ಸಂಬಂಧಿತ ಚಟುವಟಿಕೆಗಳು ರಾಜ್ಯದಾದ್ಯಂತ ಆಂದೋಲನ ರೂಪದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ರೈತರು, ಸಾರ್ವಜನಿಕರಿಗೆ ಅಂತರ್ಜಲ ಮರುಪೂರಣ ಮತ್ತು ಮಿತ ಬಳೆಕೆ, ಕೆರೆ-ಕಟ್ಟೆಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಪ್ರಸಕ್ತ 2026-27ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 1,811 ಕೋಟಿ ರೂ. ಅಂದಾಜು ಮೊತ್ತದಲ್ಲಿ 8 ಏತ ನೀರಾವರಿ ಯೋಜನೆಗಳ ಮೂಲಕ ಸುಮಾರು 88 ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಕಳೆದ 2025-26ನೇ ಸಾಲಿನಲ್ಲಿ ಮಂಡಳಿ ಮತ್ತು ಸಣ್ಣ ನೀರಾವರಿ ಇಲಾಖೆ ಶೇ.50-50 ಸುಮಾರು 200 ಕೋಟಿ ರೂ. ಅನುದಾನದಲ್ಲಿ ಶಿರಪೂರ ಮಾದರಿಯ ಸರಣಿ ಚೆಕ್ ಡ್ಯಾಂ ಮತ್ತು ಕೆರೆ ಅಭಿವೃದಿಯ್ದ 13 ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದೂವರೆಗೆ 10.65 ಕೋಟಿ ರೂ. ಖರ್ಚು ಮಾಡಲಾಗಿದೆ. ಅದೇ ರೀತಿ ಪ್ರಸಕ್ತ 2026-27ನೇ ಸಾಲಿನಲ್ಲಿಯೂ ಸಹ ಕೆ.ಕೆ.ಅರ್.ಡಿ.ಬಿ. ಮಂಡಳಿ, ಸಣ್ಣ ನಿರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ತಲಾ 75 ಕೋಟಿ ರೂ. ಸೇರಿ ಒಟ್ಟು 225 ಕೋಟಿ ರೂ. ವೆಚ್ಚದಲ್ಲಿ ಪ್ರದೇಶದ ಇನ್ನುಳಿದ 25 ವಿದಾನಸಭಾ ಕ್ಷೇತ್ರದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 343 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ ಒಟ್ಟು 3 ಏತ ನೀರಾವರಿ ಯೋಜನೆ ಮೂಲಕ ಸುಮಾರು 19 ಕರೆ ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಸೇಡಂ ತಾಲೂಕಿನ ಬರ ಪೀಡಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ 89.30 ಕೋಟಿ ರೂ. ವೆಚ್ಚದ ಬೀರನಳ್ಳಿ ಏತ ನೀರಾವರಿ ಯೋಜನೆ ಮತ್ತು 82.50 ಕೋಟಿ ರೂ. ವೆಚ್ಚದ ಕಾಚೂರ ಹತ್ತಿರ ಏತ ನೀರಾವರಿ ಯೋಜನೆ ಸೇರಿವೆ. ಇದಲ್ಲದೆ 197.71 ಕೋಟಿ ರೂ. ಮೊತ್ತದ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 9 ಕೆರೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ದಿಗೆ ಬೆಣ್ಣೆತೋರಾ ಜಲಾಶಯದ ಮೇಲ್ಭಾಗದಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆ ಮತ್ತು ಚಿತ್ತಾಪುರ ತಾಲೂಕಿನಲ್ಲಿ 135 ಕೋಟಿ ರೂ. ಮೊತ್ತದಲ್ಲಿ 9 ಕೆರೆ ತುಂಬಿಸುವ ಯೋಜನೆ ಸಹ ಪ್ರಗತಿಯಲ್ಲಿವೆ ಎಂದ ಸಚಿವ ಅಜಯ್ ಸಿಂಗ್ 130 ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿ ತಾಲೂಕಿನ ಹರವಾಳ ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಸಹ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯ ಜನತೆ ಮತ್ತು ವಿಶೇಷವಾಗಿ ಜೇವರ್ಗಿ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಇದೀಗ ಸಚಿವನಾಗಿರುವೆ. ಕಳೆದ 50 ವರ್ಷದಿಂದ ನಮ್ಮ ಕುಟುಂಬಕ್ಕೆ ಜೇವರ್ಗಿ ಕ್ಷೇತ್ರದ ಮತದಾರರು ನೀಡಿರುವ ಆಶೀರ್ವಾದ, ಸಹಕಾರ ಮರೆಯಲು ಸಾಧ್ಯವಿಲ್ಲ. ಡಾ. ಮಲ್ಲಿಕಾರ್ಜುನ ಅವರ ಸಹಕಾರದಿಂದ ಜಿಲ್ಲೆಗೆ ಮೂರು ಮಂತ್ರಿ ಸ್ಥಾನ ಸಿಗಲು ಸಾಧ್ಯವಾಗಿದ್ದು, ಪಕ್ಷದ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ, ಜನರ ನಿರೀಕ್ಷೆಯಂತೆ ಜಿಲ್ಲೆ ಮತ್ತು ನಾಡಿನ ಜನತೆಯ ಸೇವೆಯನ್ನು ಪ್ರಮಾಣಿಕವಾಗಿ ಮಾಡುವೆ ಎಂದು ಅಜಯ್ ಸಿಂಗ್ ಹೇಳಿದರು.

*ಮಂಡಳಿಯಿಂದ 10 ಸಾವಿರ ಕೋಟಿ ಖರ್ಚು: ನಮ್ಮ ಸರ್ಕಾರ ಬಂದ ಮೇಲೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಕಳೆದ ಮೂರು ವರ್ಷದಲ್ಲಿ 10 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಬಿಡುಗಡೆ ಮಾಡಿದ ಹಣ ಖರ್ಚು ಮಾಡುವುದಿಲ್ಲ ಎಂಬ ಅಪವಾದ ಮಂಡಳಿ ಮೇಲಿತ್ತು. ಅದರೆ ನಾನು ಅಧ್ಯಕ್ಷನಾದ ಮೇಲೆ 2023-24ರಲ್ಲಿ 2,009 ಕೋಟಿ ರೂ., 2024-25ರಲ್ಲಿ 3,358 ಕೋಟಿ ರೂ., 2025-26ರಲ್ಲಿ 4,137 ಕೋಟಿ ರೂ. ಖರ್ಚು ಮಾಡಿದ್ದೇನೆ. ಪ್ರಸಕ್ತ 2026-27ನೇ ಸಾಲಿನ ವರ್ಷಾಂತ್ಯಕ್ಕೆ 5,000 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಆಗಿರುವ ಸಚಿವ ಡಾ.ಅಜಯ್ ಸಿಂಗ್ ತಿಳಿಸಿದರು.

ಸೈನ್ಸ್ ಸಿಟಿ:

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೆ ಮೊದಲನೇ ಸುತ್ತಿನ ಸಭೆ ನಡೆಸಿದ್ದು, ಪ್ರದೇಶದಲ್ಲಿ ಪ್ಲಾನೇಟರಿಯಂ, ಸೈನ್ಸ್ ಸೆಂಟರ್, ಸೈನ್ಸ್ ಸಿಟಿ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು. ಜಿಲ್ಲೆಯವರೆಯಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಐ.ಟಿ.-ಬಿ.ಟಿ. ಸಚಿವರಾಗಿರುವುದರಿಂದ ಅವರೊಂದಿಗೆ ಚರ್ಚಿಸಿ ಮುಂದಿನ ದಿನದಲ್ಲ ಈ ಯೋಜನೆಗಳ ನೀಲಿ ನಕ್ಷೆ ಸಿದ್ದಪಡಿಸಲಾಗುವದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಡಾ. ಅಜಯ್ ಸಿಂಗ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button