ಜಂತರ್ ಮಂತರ್ ಲಾಠಿ ಚಾರ್ಜ್ ಖಂಡಿಸಿ, ಜಾಮಿಯಾ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ; ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಕಾಪಾಡುವಂತೆ ಯಂಗ್ ಡೆಮಾಕ್ರಟ್ಸ್ ಆಗ್ರಹ.

ಕಲಬುರಗಿ, ಜು.25: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ಜಾಮಿಯಾ ವಿಶ್ವವಿದ್ಯಾಲಯದ ರಕ್ಷಣೆ ಹಾಗೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್‌ನ್ನು ಖಂಡಿಸಿ ಯಂಗ್ ಡೆಮಾಕ್ರಟ್ಸ್ ಸಂಘಟನೆಯ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಜಂಟಿ ಸಂಚಾಲಕ ಸೈಯದ್ ಅಲೀಂ ಇಲಾಹಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೇಂದ್ರ ಶಿಕ್ಷಣ ಸಚಿವರ ಭಾವಚಿತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸೈಯದ್ ಅಲೀಂ ಇಲಾಹಿ, ದೇಶದಲ್ಲಿ ಶಿಕ್ಷಣ, ಪ್ರಜಾಪ್ರಭುತ್ವ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು ಎಂದು ಆಗ್ರಹಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳಿಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ದೇಶದ ಯುವಜನತೆ ಒಪ್ಪುವುದಿಲ್ಲ. ಜಾಮಿಯಾ ವಿಶ್ವವಿದ್ಯಾಲಯದ ವಿರುದ್ಧ ನಡೆಯುತ್ತಿರುವ ಕ್ರಮಗಳು ಶಿಕ್ಷಣ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದರು.
ಯಂಗ್ ಡೆಮಾಕ್ರಟ್ಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಮದೀಹಾ ರಝಾ ಮಾತನಾಡಿ, ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಯುವಜನತೆ ವಿರೋಧಿಸುತ್ತದೆ. ಶಿಕ್ಷಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಯಂಗ್ ಡೆಮಾಕ್ರಟ್ಸ್ ರಾಜ್ಯ ಸಂಘಟನಾ ಸಮಿತಿಯ ಪದಾಧಿಕಾರಿಗಳು, ವಿವಿಧ ಯುವ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.



