“ಸರ್ಕಾರಿ ಹಾಸ್ಟೆಲ್‌ಗೆ ನಿಮ್ಮ ಮಕ್ಕಳನ್ನು ಸೇರಿಸಿ; ಸಚಿವ ಪ್ರಿಯಾಂಕ್ ಖರ್ಗೆಗೆ ಶ್ರೀರಾಮ ಸೇನೆಯ ಸವಾಲ್”
ಆರ್‌ಎಸ್‌ಎಸ್ ಕುರಿತು ಸಚಿವರ ಹೇಳಿಕೆಗೆ ತಿರುಗೇಟು; ವಿದ್ಯಾರ್ಥಿ ನಿಲಯಗಳ ದುಸ್ಥಿತಿ ಸರಿಪಡಿಸುವಂತೆ ಆಗ್ರಹ

ಕಲಬುರಗಿ, ಜು.11: ರಾಜ್ಯದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್‌ಗೆ ಸೇರುತ್ತಾರೆಯೇ ಎಂಬ ಹೇಳಿಕೆ ನೀಡಿರುವುದಕ್ಕೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತೀವ್ರ ತಿರುಗೇಟು ನೀಡಿದ್ದಾರೆ. “ಮೊದಲು ನಿಮ್ಮ ಮಕ್ಕಳನ್ನೇ ಸರ್ಕಾರಿ ಹಾಸ್ಟೆಲ್‌ಗಳಿಗೆ ಸೇರಿಸಿ” ಎಂದು ಸಚಿವರಿಗೆ ಸವಾಲು ಹಾಕಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಅದನ್ನು ಸರಿಪಡಿಸುವ ಬದಲು ಸಚಿವರು ರಾಜಕೀಯ ಹೇಳಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಚಿತ್ತಾಪುರ ತಾಲೂಕಿನ ದಂಡೋತಿ ವಿದ್ಯಾರ್ಥಿ ನಿಲಯದಲ್ಲಿ ಉಂಟಾಗಿರುವ ಅವ್ಯವಸ್ಥೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದವರು ದೊಡ್ಡ ನಾಯಕರೆಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಟೀಕಿಸಿದರು.
ಸಚಿವರು ಆರ್‌ಎಸ್‌ಎಸ್ ಬಗ್ಗೆ ಪ್ರಶ್ನಿಸುವ ಮೊದಲು, ತಾವು ಅಥವಾ ಕಾಂಗ್ರೆಸ್ ನಾಯಕರು ಎಷ್ಟು ಮಕ್ಕಳನ್ನು ಮೊರಾರ್ಜಿ ದೇಸಾಯಿ ಹಾಗೂ ಇತರೆ ಸರ್ಕಾರಿ ವಸತಿ ನಿಲಯಗಳಲ್ಲಿ ಓದಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ತಮ್ಮ ಕ್ಷೇತ್ರದ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಕಾಳಜಿ ಇದ್ದರೆ, ವಿಶೇಷ ವಿಮಾನದ ಮೂಲಕ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ನೋವು ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರಬುದ್ಧ ಅಕಾಡೆಮಿಯ ಮೇಲ್ಛಾವಣಿ ಕುಸಿತ, ಸರ್ಕಾರಿ ಬಾಲಕಿಯರ ಮಹಾವಿದ್ಯಾಲಯದ ಮೇಲ್ಛಾವಣಿ ಅವಘಡ ಸೇರಿದಂತೆ ಹಲವು ಘಟನೆಗಳ ಸಂದರ್ಭದಲ್ಲೂ ಸಚಿವರು ಭೇಟಿ ನೀಡದಿರುವುದನ್ನು ಉಲ್ಲೇಖಿಸಿದ ಅವರು, ದಂಡೋತಿ ಪ್ರಕರಣದಲ್ಲೂ ಅದೇ ನಿರ್ಲಕ್ಷ್ಯ ಮುಂದುವರಿಯಬಾರದು ಎಂದು ಹೇಳಿದರು.
ಜಿಲ್ಲೆಯ ವಿವಿಧ ವಸತಿ ನಿಲಯಗಳಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂಬ ಆರೋಪಗಳಿದ್ದು, ಅದರಲ್ಲೂ ಚಿತ್ತಾಪುರ ತಾಲೂಕಿನ ಕೆಲ ವಸತಿ ನಿಲಯಗಳಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಕುರಿತು ತಕ್ಷಣ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಕೇಶ್ ಜಮಾದಾರ್, ಗುರುಶಾಂತ ತೆಂಗಳಿ, ಮಲ್ಲಿಕಾರ್ಜುನ ಹಿರೇಪೂಜಾರಿ, ಸುಧಾಕರ್, ರೋಹಿತ್ ಪಿಸ್ಕೆ, ನಿಂಗಣ್ಣ ಕೊಣ್ಣೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.



