ಮುಖ್ಯ ಪೊಲೀಸ್ ಪೇದೆಯ ಮೇಲೆ ಮಾರಣಾಂತಿಕ ಹಲ್ಲೆ: ಅಣ್ಣ ಹಾಗೂ ಸೋದರಳಿಯ ವಿರುದ್ಧ ಎಫ್‌ಐಆರ್
ಚಾಕುವಿನಿಂದ ಹಲ್ಲೆ ನಡೆಸಿದ ಆರೋಪ – ಕಲಬುರಗಿಯ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಲಬುರಗಿ, ಆ.6: ನಗರದ ಮುಖ್ಯ ಪೊಲೀಸ್ ಪೇದೆಯೊಬ್ಬರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ಅಣ್ಣ ಹಾಗೂ ಸೋದರಳಿಯ ವಿರುದ್ಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಶ್ರೀನಗರದ ನೃಪತುಂಗ ಕಾಲೊನಿ ಹಿಂಭಾಗದ ನಿವಾಸಿ ಹಾಗೂ ಡಿಎಆರ್ ಹೆಡ್ ಕಾನ್ಸ್‌ಟೇಬಲ್ ತಾರಾಸಿಂಗ್ ತಂದೆ ಸೇವಾ ನಾಯಕ್ ಅವರ ದೂರಿನ ಮೇರೆಗೆ, ಅವರ ಅಣ್ಣ ದಶರಥ ಸೇವಾ ನಾಯಕ್ ಹಾಗೂ ದಶರಥ ಅವರ ಪುತ್ರ ಶಿವಸಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಆಗಸ್ಟ್ 3ರಂದು ರಾತ್ರಿ ಸುಮಾರು 9.30 ಗಂಟೆಗೆ ದಶರಥ ಅವರ ಮನೆಯ ಮುಂಭಾಗದಲ್ಲಿ ಮೋಟಾರ್ ಸೈಕಲ್ ಮೇಲೆ ಕುಳಿತು ಮಾತನಾಡುತ್ತಿದ್ದ ವೇಳೆ, ಶಿವಸಾಯಿ ಗಾಂಜಾ ಸೇವಿಸಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ತಲೆಯ ಹಿಂಭಾಗಕ್ಕೆ ಮೂರು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಮನೆಯೊಳಗೆ ತೆರಳಿದ ತಾರಾಸಿಂಗ್ ಅವರನ್ನು ಹಿಂಬಾಲಿಸಿದ ದಶರಥ, “ಪದೇ ಪದೇ ನನ್ನ ಮನೆ ಹತ್ತಿರ ಬಂದು ತೊಂದರೆ ಮಾಡುತ್ತಿದ್ದೀಯ” ಎಂದು ಜಗಳವಾಡಿದ್ದು, ಬಳಿಕ ದಶರಥ ಹಾಗೂ ಶಿವಸಾಯಿ ಇಬ್ಬರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ತಾರಾಸಿಂಗ್ ನೀಡಿದ ದೂರಿನ ಆಧಾರದಲ್ಲಿ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



