ಪ್ರತಿ ಟನ್ ಕಬ್ಬಿಗೆ ₹4 ಸಾವಿರ ಬೆಂಬಲ ಬೆಲೆ ನೀಡಬೇಕು: ಬಂಡೆಪ್ಪ ಖಾಶೆಂಪುರ ಆಗ್ರಹ

ಬೀದರ್, ನ. 10: ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ₹4,000 ಬೆಲೆ ನಿಗದಿಪಡಿಸಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುವ ಕಬ್ಬಿನ ತೂಕದ ಯಂತ್ರಗಳ ಬಗ್ಗೆ ಹಲವು ಅನುಮಾನಗಳಿವೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಿ, ರೈತರ ತೂಕದ ವ್ಯತ್ಯಾಸದ ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಬಸ್ ಪ್ರಯಾಣ ದರ, ಹಾಲು, ಮೊಸರು, ಬೆಣ್ಣೆ ಹಾಗೂ ತುಪ್ಪದ ಬೆಲೆ ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಿದೆ ಎಂದು ಟೀಕಿಸಿದರು.
ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಿದೆ ಎಂದು ಸರ್ಕಾರ ಪ್ರಚಾರ ಮಾಡುತ್ತಿದೆ. ಪ್ರತಿ ಲೀಟರ್ ಹಾಲಿಗೆ ₹8 ಹೆಚ್ಚಳ ಮಾಡಲಾಗಿದ್ದು, ಅದರಲ್ಲಿ ರೈತರಿಗೆ ₹7 ಹಾಗೂ ಹಾಲು ಒಕ್ಕೂಟಕ್ಕೆ ₹1 ದೊರೆಯುತ್ತಿದೆ. ಆದರೆ ಹೆಚ್ಚಿದ ಬೆಲೆಯ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ. ಇದರಲ್ಲಿ ಸರ್ಕಾರದ ಕೊಡುಗೆ ಏನೂ ಇಲ್ಲ ಎಂದು ಆರೋಪಿಸಿದರು.
ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕಿರುವ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಬಳಿಕ ಜನರಿಂದ ದೂರವಾಗಲು ಪ್ರಯತ್ನಿಸುತ್ತಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಇಷ್ಟು ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಹೆಚ್ಚಳವಾಗಿರಲಿಲ್ಲ ಎಂದು ಹೇಳಿದರು.
ಬೀದರ್ನಿಂದ ಬೆಂಗಳೂರಿಗೆ ಸುಮಾರು 750 ಕಿ.ಮೀ. ದೂರವಿದೆ. ಹಿಂದೆ ಕೆಂಪು ಬಸ್ನಲ್ಲಿ ಪ್ರಯಾಣಿಸಲು ₹949 ದರ ಇತ್ತು. ಈಗ ಅದನ್ನು ₹1,145ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಟಿಕೆಟ್ಗೆ ₹196 ಹೆಚ್ಚುವರಿ ಹೊರೆ ಬಿದ್ದಿದೆ. ಒಂದು ಬಸ್ ಒಂದು ಸುತ್ತಿನ ಪ್ರಯಾಣಕ್ಕೆ ಸರಾಸರಿ 167 ಲೀಟರ್ ಡೀಸೆಲ್ ಬಳಸುತ್ತದೆ. 2023ರಲ್ಲಿ ಪ್ರತಿ ಲೀಟರ್ ಡೀಸೆಲ್ಗೆ ₹89 ಇದ್ದ ದರ ಈಗ ₹99.70 ಆಗಿದೆ. ಹೀಗಾಗಿ ಒಂದು ಸುತ್ತಿನ ಪ್ರಯಾಣಕ್ಕೆ ಸುಮಾರು ₹2 ಸಾವಿರ ಹೆಚ್ಚುವರಿ ವೆಚ್ಚವಾಗುವ ಬದಲು ₹6 ಸಾವಿರದಷ್ಟು ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.
ಮಹಿಳೆಯರ ಉಚಿತ ಬಸ್ ಪ್ರಯಾಣದ ವೆಚ್ಚವನ್ನು ಸರ್ಕಾರ ಭರಿಸಲಾಗುತ್ತಿಲ್ಲ. ಸಾರಿಗೆ ಸಚಿವರಿಗೆ ಲೆಕ್ಕಾಚಾರದ ಅರಿವಿಲ್ಲ. ಹಾಲು, ಸಾರಾಯಿ, ಮುದ್ರಾಂಕ ಶುಲ್ಕ ಸೇರಿದಂತೆ ಹಲವು ವಸ್ತುಗಳ ದರ ಹೆಚ್ಚಿಸಲಾಗಿದೆ. ಯುವನಿಧಿ ಯೋಜನೆಯೂ ಸ್ಥಗಿತಗೊಂಡಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವರ್ಷಕ್ಕೆ ₹50 ಸಾವಿರ ಕೋಟಿ ಬೇಕಾಗುತ್ತದೆ. ಆದರೆ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಮಾಡುತ್ತಿದೆ. ಗುತ್ತಿಗೆದಾರರ ಬಾಕಿ ಪಾವತಿಯಾಗಿಲ್ಲ; ರೈತರಿಗೂ ನೆಮ್ಮದಿಯಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಬರ ಪರಿಹಾರ ತಕ್ಷಣ ವಿತರಿಸುವ ಬದಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಕೇಂದ್ರ ಸಹಕರಿಸುತ್ತಿಲ್ಲ ಎಂದು ಹೇಳುವ ರಾಜ್ಯ ಸರ್ಕಾರ, ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗಾಗಿ ಕಾಯದೆ ಸಾಲಮನ್ನಾ ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಜೆಡಿಎಸ್ಗೆ ಇನ್ನೂ ಐದು ವರ್ಷ ಪೂರ್ಣಾವಧಿ ಅಧಿಕಾರ ನೀಡಬೇಕು ಎಂದು ಅವರು ಹೇಳಿದರು.
ಬೀದರ್–ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ಒತ್ತಾಯ
ಸ್ಥಗಿತಗೊಂಡಿರುವ ಬೀದರ್–ಬೆಂಗಳೂರು ವಿಮಾನ ಸೇವೆಯನ್ನು ಪುನರಾರಂಭಿಸಬೇಕು ಎಂದು ಖಾಶೆಂಪುರ ಒತ್ತಾಯಿಸಿದರು. 2006ರಲ್ಲಿ ತಾವು ಸಚಿವರಾಗಿದ್ದಾಗ ಕೇಂದ್ರ ಸರ್ಕಾರದ ವಿಶ್ವಾಸ ಪಡೆದು ವಿಮಾನ ಸೇವೆ ಆರಂಭಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದರು. ಜಿಲ್ಲೆಯಿಂದ ನಿಯೋಗ ಕರೆದೊಯ್ದು ಮತ್ತೆ ವಿಮಾನಯಾನ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇದೆ. ಈ ಕುರಿತು ಹಿರಿಯರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಬೇಕೇ ಅಥವಾ ಪ್ರತ್ಯೇಕವಾಗಿ ಕಣಕ್ಕಿಳಿಯಬೇಕೇ ಎಂಬುದನ್ನು ಹಿರಿಯರು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪರಿಪೂರ್ಣವಾಗಿದೆ. ಎಲ್ಲಾದರೂ ಅಕ್ರಮ ನಡೆದಿದ್ದರೆ ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಖಾಶೆಂಪುರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ಪ್ರಧಾನ ಕಾರ್ಯದರ್ಶಿ ಅಶೋಕ ಕೊಡಗೆ, ಮುಖಂಡರಾದ ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ರಾಜು ಕಾಡ್ಯಾಳ, ಬೊಮ್ಮಗೊಂಡ ಚಟ್ಟಾವಾಡಿ, ಅಭಿ ಕಾಳೆ, ಜಾಫೆಟ್ ಕಾಡ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
