ಜಿಲ್ಲಾಸುದ್ದಿ

ಕಲ್ಯಾಣ ಕರ್ನಾಟಕ ವಿಮೋಚನೆಗೆ ದೊಡ್ಡಪ್ಪ ಅಪ್ಪ ಅವರ ಕೊಡುಗೆ ಅಪಾರ: ದೇಶಮುಖ

ಕಲಬುರಗಿ, ಸೆ.17: ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ನಡೆದ ಹೋರಾಟದಲ್ಲಿ ಶರಣಬಸವೇಶ್ವರ ಸಂಸ್ಥಾನದ 7ನೇ ಪೀಠಾಧಿಪತಿ ಲಿಂ. ದೊಡ್ಡಪ್ಪ ಅಪ್ಪ ಅವರ ಕೊಡುಗೆ ಅಪಾರವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತರೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ತಕ್ಷಣ ಸ್ವಾತಂತ್ರ್ಯ ಪಡೆದಿರಲಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಿಂದ ಈ ಪ್ರದೇಶವನ್ನು ಮುಕ್ತಗೊಳಿಸಲಾಯಿತು ಎಂದರು.

ಕಲ್ಯಾಣ ಕರ್ನಾಟಕದ ಜನರು ನಿಜಾಮರ ಆಡಳಿತದ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದರು. ಈ ಭಾಗದ ನಾಯಕರ ಹೋರಾಟ ಮತ್ತು ತ್ಯಾಗದ ಫಲವಾಗಿ ವಿಮೋಚನೆ ಸಾಧ್ಯವಾಯಿತು. ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶರಣಬಸವೇಶ್ವರ ಸಂಸ್ಥಾನ ಹಗಲಿರುಳು ಶ್ರಮಿಸುತ್ತಿದೆ. ಶಿಕ್ಷಣದ ಮೂಲಕ ಈ ಭಾಗದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಂಸ್ಥೆ ನಿರಂತರವಾಗಿ ಕೊಡುಗೆ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ್, ಪ್ರಾಚಾರ್ಯರಾದ ಡಾ. ಎಂ.ಆರ್. ಹುಗ್ಗಿ, ಬಾಬುರಾವ್ ಚವಾಣ್, ಡಾ. ಸೀಮಾ ಪಾಟೀಲ, ಡಾ. ಕಲ್ಪನಾ ಭೀಮಳ್ಳಿ, ಜ್ಯೋತಿ ಮಲ್ಲಾಪೂರೆ, ಶಿವಕುಮಾರ್ ಸಜ್ಜನ್, ಕಂಡೇರಾವ್ ಸಾತಖೇಡ್, ವಿನೋದ ಪತಂಗೆ, ಶರಣಬಸಪ್ಪ ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

Leave a Reply

Your email address will not be published. Required fields are marked *

Back to top button