ಕ್ರೀಡೆಶಿಕ್ಷಣ

ಗುರು ನಾನಕ್ ಮ್ಯಾರಥಾನ್ 2.0 ಲೋಗೋ ಅನಾವರಣ: ನವೆಂಬರ್ 15ರಂದು ಶಾಂತಿಗಾಗಿ ಓಟ

3, 5, 10 ಹಾಗೂ 21 ಕಿ.ಮೀ. ವಿಭಾಗಗಳಲ್ಲಿ ಮ್ಯಾರಥಾನ್; ಬೀದರ್‌ನ್ನು ಕ್ರೀಡಾ ಹಾಗೂ ಪ್ರವಾಸಿ ತಾಣವಾಗಿ ಬೆಳೆಸುವ ಗುರಿ

ಬೀದರ್, ಜು.27: ನಗರದ ಮೈಲೂರು ರಸ್ತೆಯಲ್ಲಿರುವ ಗುರು ನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಗುರುಭವನದಲ್ಲಿ ಸೋಮವಾರ ಗುರು ನಾನಕ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತಿರುವ ‘ಮ್ಯಾರಥಾನ್ 2.0’ ಕಾರ್ಯಕ್ರಮದ ಲೋಗೋವನ್ನು ಅನಾವರಣಗೊಳಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮಾತನಾಡಿ, ನವೆಂಬರ್ 15ರಂದು “ಶಾಂತಿಗಾಗಿ ಓಟ, ಮಾನವತೆಗಾಗಿ ಓಟ” ಎಂಬ ಧ್ಯೇಯದೊಂದಿಗೆ ಮ್ಯಾರಥಾನ್ 2.0 ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಮ್ಯಾರಥಾನ್ ಅನ್ನು 3 ಕಿ.ಮೀ., 5 ಕಿ.ಮೀ., 10 ಕಿ.ಮೀ. ಹಾಗೂ 21 ಕಿ.ಮೀ. ವಿಭಾಗಗಳಲ್ಲಿ ನಡೆಸಲಾಗುವುದು ಎಂದರು.

ಈ ಮ್ಯಾರಥಾನ್ ಮೂಲಕ ಬೀದರ್ ಜಿಲ್ಲೆಯನ್ನು ಪ್ರಮುಖ ಕ್ರೀಡಾ ಹಾಗೂ ಪ್ರವಾಸಿ ತಾಣವಾಗಿ ಬೆಳೆಸುವ ಉದ್ದೇಶ ಹೊಂದಲಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಜಿಲ್ಲೆಗೆ ಆಗಮಿಸುವುದರಿಂದ ಇಲ್ಲಿನ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಪರಿಚಯವೂ ದೇಶದಾದ್ಯಂತ ಹರಡಲಿದೆ. ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಗುರು ನಾನಕ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ, ಅಭಿಯಂತ್ರಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಂಸ್ಥೆ ಕೇವಲ ಶಿಕ್ಷಣವನ್ನಷ್ಟೇ ಅಲ್ಲದೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದು ಡಾ. ರೇಷ್ಮಾ ಕೌರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪುನೀತ್ ಸಿಂಗ್, ಪವೀತ್ ಸಿಂಗ್, ಗುರು ನಾನಕ್ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ. ನಿಶಾ ಕೌರ್, ಡಾ. ಜಸ್ಮಿನೀತ್ ಕೌರ್, ಜಠರ ಮತ್ತು ಅಂತರಾಂಗ ರೋಗ ತಜ್ಞ ಡಾ. ಸಂತೋಷ್ ಕುಮಾರ್, ಸ್ತ್ರೀರೋಗ ಹಾಗೂ ಐವಿಎಫ್ ತಜ್ಞ ಡಾ. ಸಂದೀಪ್ ಗಾಯಕ್ವಾಡ್, ಜನರಲ್ ಮೆಡಿಸಿನ್ ತಜ್ಞೆ ಡಾ. ನವ್ಯಶ್ರೀ, ಅಸ್ಥಿ ಚಿಕಿತ್ಸಾ ತಜ್ಞ ಡಾ. ವೀರೇಶ್ ಗೋರಶೆಟ್ಟಿ, ಗುರು ನಾನಕ್ ಆಸ್ಪತ್ರೆಯ ಸಿಇಒ ಕಾಮೇಶ್ವರ ರಾವ್, ಕರ್ನಲ್ ಆರ್.ಡಿ. ಸಿಂಗ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button