ಬಾಳಿ ಲೇಔಟ್ನಲ್ಲಿ ಗಣಪತಿ ಹಬ್ಬಕ್ಕೆ ವರ್ಣರಂಜಿತ ತೆರೆ

ಕಲಬುರಗಿ, ಸೆ.21: ನಗರದ ಬಾಳಿ ಲೇಔಟ್ನಲ್ಲಿ ಸನಾತನ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಏಳು ದಿನಗಳ ಕಾಲ ಪೂಜೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ ಬಳಿಕ ಸಂಭ್ರಮದ ವಾತಾವರಣದಲ್ಲಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು.
ಪತ್ರಕರ್ತ ಹಾಗೂ ಸಾಹಿತಿ ಪುರುಷೋತ್ತಮ ಕುಲಕರ್ಣಿ ಮಾತನಾಡಿ, ಗಣಪತಿ ಜ್ಞಾನ ಮತ್ತು ಬುದ್ಧಿಯ ಸಂಕೇತ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಮೂಲಕ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ದರು. ಅದೇ ಮಾದರಿಯಲ್ಲಿ ಸನಾತನ ಯುವಕ ಮಂಡಳಿ ಕಾಲೋನಿಯ ಜನರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಉತ್ಸವದ ಅಂಗವಾಗಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಕಳೆದ ಸುಮಾರು 12 ವರ್ಷಗಳಿಂದ ಸುರೇಶ್ ಜಮಾದಾರ್ ಅವರ ನೇತೃತ್ವದಲ್ಲಿ ಕಾಲೋನಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಉತ್ಸವ ಆಚರಿಸುತ್ತಿರುವುದನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೋನಿ ಮುಖಂಡರಾದ ಲಕ್ಷ್ಮಣ ದಾಂಡೇಕರ್, ಮಂಡಳಿ ಅಧ್ಯಕ್ಷ ಬಸವರಾಜ್, ರಾಜು ಜಮಾದಾರ್, ಸಂಜು, ಬಾಗೇಶ್, ವಿವೇಕ್ ಸೇರಿದಂತೆ ಸನಾತನ ಯುವಕ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಜ್ಯೋತಿ ವಾರದ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಏಳು ದಿನಗಳ ಕಾಲ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಕೊನೆಯ ದಿನ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿತ್ತು.
ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಕಾಲೋನಿ ನಿವಾಸಿಗಳು ಉತ್ಸಾಹದಿಂದ ಪಾಲ್ಗೊಂಡರು. ಯುವಕರು ಕುಣಿದು ಕುಪ್ಪಳಿಸಿ ‘ಜೈ ಗಣೇಶ’ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ಶಾಂತಿಯುತ ಮೆರವಣಿಗೆಯ ಮೂಲಕ ಗಣೇಶನಿಗೆ ಭಕ್ತಿಪೂರ್ವಕ ವಿದಾಯ ಹೇಳಲಾಯಿತು.



