ಶಿಕ್ಷಣ

ಹೆಣ್ಣು–ಗಂಡು ಎಂಬ ಭೇದ ಬೇಡ; ಸಮಾನ ಅವಕಾಶ ನೀಡಿದಾಗಲೇ ಸಮಾಜದ ಅಭಿವೃದ್ಧಿ: ಜಗದೇವಿ ಚನ್ನಶೆಟ್ಟಿ

'ಬೇಟಿ ಬಚಾವೋ, ಬೇಟಿ ಪದಾವೋ' ಜಾಗೃತಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ರಕ್ಷಣೆಗೆ ಒತ್ತು

ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಹೆಣ್ಣು–ಗಂಡು ಎಂಬ ತಾರತಮ್ಯ ಮಾಡದೆ ಇಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಜಗದೇವಿ ಚನ್ನಶೆಟ್ಟಿ ಹೇಳಿದರು.

ಬೀದರ್ ಜಿಲ್ಲೆಯ ಸಂಗೊಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಬೇಟಿ ಬಚಾವೋ, ಬೇಟಿ ಪದಾವೋ’ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು.

ಅಂಗನವಾಡಿ ಮೇಲ್ವಿಚಾರಕಿ ಸುರೇಖಾ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ರಭಾರಿ ಮುಖ್ಯಗುರು ಸಂಧ್ಯಾರಾಣಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಹೆಣ್ಣು ಮಕ್ಕಳ ಸಬಲೀಕರಣ ಸಾಧ್ಯ. ಶಾಲೆಗೆ ದಾಖಲಾಗುವ ಪ್ರತಿಯೊಬ್ಬ ಹೆಣ್ಣು ಮಗು ತನ್ನ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಸೂರ್ಯಕಾಂತ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ವಂದಿಸಿದರು. ಉಷಾ, ಸುವರ್ಣ, ಮರ್ಷಿ, ಕಸ್ತೂರಬಾಯಿ, ಸಂಗೀತಾ, ಸುರೇಖಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲೆಯ ಶಿಕ್ಷಕರು, ಗ್ರಾಮಸ್ಥರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button