ಬರ ಪರಿಹಾರ, ಬೆಳೆ ವಿಮೆ ಎರಡನೇ ಕಂತು ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ
ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಒತ್ತಾಯ – ವಿವಿಧ ಜನಸಮಸ್ಯೆಗಳ ಪರಿಹಾರಕ್ಕೂ ಆಗ್ರಹ

ರೈತರಿಗೆ ಬರ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರದ ಎರಡನೇ ಕಂತನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಬಗಲಿ ಆಗ್ರಹಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರಿಗೆ ಮನವಿ ಸಲ್ಲಿಸಿದ ಅವರು, ರೈತರು ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಫಜಲಪುರ ಪೊಲೀಸ್ ಠಾಣೆಯಿಂದ ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ತಪ್ಪಿಸಿಕೊಂಡ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಪರಾರಿಯಾದವರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿದರು.
ಚಿತ್ತಾಪುರ ಕ್ಷೇತ್ರದ ದಂಡೋತಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಸುಮಾರು 50 ರಿಂದ 60 ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದಲ್ಲಿಯೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದರು. ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್ ಪ್ರಕ್ರಿಯೆಯಲ್ಲಿಯೂ ಶಾಶ್ವತ ನಿವಾಸ ಪ್ರಮಾಣಪತ್ರ ಕಡ್ಡಾಯ ಮಾಡುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇ.36 ಹಾಗೂ ಜುಲೈನಲ್ಲಿ ಇದುವರೆಗೆ ಶೇ.81ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂಗಾರು ಬೆಳೆಗಳು ಹಾನಿಗೊಳಗಾಗಿವೆ. ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು, ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಭೀಮಾ ನದಿಗೆ ಮಹಾರಾಷ್ಟ್ರದಿಂದ 5 ಟಿಎಂಸಿ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯಲ್ಲಿರುವ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ್, ಶಾಸಕ ಡಾ. ಅವಿನಾಶ ಜಾಧವ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಬೆಣ್ಣೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಬಿರಾದಾರ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.



