ಜಿಲ್ಲಾಸುದ್ದಿ

ಸಿಂಧೆ ವರ್ಗಾವಣೆ: ಕಲಬುರಗಿ ಪಾಲಿಕೆಗೆ ನೂತನ ಆಯುಕ್ತರಾಗಿ ಶ್ರವಣಕುಮಾರ್

ಕಲಬುರಗಿ, ಸೆ. 9: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅವಿನಾಶ್ ಸಿಂಧೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಶ್ರವಣಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರವಣಕುಮಾರ್ ಅವರನ್ನು ಕಲಬುರಗಿ ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಇದೇ ವೇಳೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅವಿನಾಶ್ ಸಿಂಧೆ ಅವರನ್ನು ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಅವಿನಾಶ್ ಸಿಂಧೆ ಅವರ ಅವಧಿಯಲ್ಲಿ ಪಾಲಿಕೆ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿದ್ದವು. ಅಕ್ರಮ ತೆರವು ಕಾರ್ಯಾಚರಣೆಯಲ್ಲಿ ಏಕರೂಪದ ನೀತಿ ಅನುಸರಿಸದೆ, ಆಡಳಿತ ಪಕ್ಷದ ಪರ ಹಾಗೂ ವಿರೋಧ ಪಕ್ಷಗಳ ವಿರುದ್ಧ ವಿಭಿನ್ನ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ನೂತನ ಆಯುಕ್ತ ಶ್ರವಣಕುಮಾರ್ ಅವರು ಯಾವುದೇ ತಾರತಮ್ಯವಿಲ್ಲದೆ, ಕಾನೂನು ಮತ್ತು ನಿಯಮಗಳ ಅನ್ವಯ ಏಕರೂಪದ ನೀತಿ ಅನುಸರಿಸಿ ಅಕ್ರಮ ತೆರವು ಕಾರ್ಯಾಚರಣೆ ನಡೆಸಬೇಕು ಎಂಬುದು ಸಾರ್ವಜನಿಕರ ಹಾಗೂ ವಿವಿಧ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಿಯಮಾನುಸಾರ ಕೈಗೊಂಡು, ಎಲ್ಲರಿಗೂ ಒಂದೇ ರೀತಿಯ ಕಾನೂನು ಅನ್ವಯವಾಗುವಂತೆ ಆಡಳಿತ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button