ಸೆ.28ರಂದು ಸಸ್ಯ ವಿಜ್ಞಾನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ, ಸೆ.21: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಸೆ.28ರಂದು ‘ಸಸ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು: ಶೈಕ್ಷಣಿಕ ಶ್ರೇಷ್ಠತೆಯಿಂದ ಸಾಂಸ್ಥಿಕ ನಾಯಕತ್ವದತ್ತ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಂಯೋಜಕ ಡಾ. ರಾಕೇಶ್ಕುಮಾರ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಸ್ಯಶಾಸ್ತ್ರ ಸಂಘದ ಉದ್ಘಾಟನೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ವಹಿಸಲಿದ್ದಾರೆ. ಅಸ್ಸಾಂನ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಟಿ. ವೇಣುಧರ್ ರೆಡ್ಡಿ, ಐಎಫ್ಎಸ್ (ನಿವೃತ್ತ) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಪಿತಾಂಬರ ಪಂತ್ ರಾಷ್ಟ್ರೀಯ ಪರಿಸರ ಫೆಲೋ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾದ ಡಾ. ಆರ್. ರಾಘವೇಂದ್ರ ರಾವ್ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್. ಸತ್ಯನಾರಾಯಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಶೋಧನೆ, ಹೊಸ ಬೆಳವಣಿಗೆಗಳ ಕುರಿತು ಚರ್ಚೆ
ಸಸ್ಯ ವಿಜ್ಞಾನ ಕ್ಷೇತ್ರದಲ್ಲಿನ ಉದಯೋನ್ಮುಖ ಬೆಳವಣಿಗೆಗಳು, ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಹಾಗೂ ಸಸ್ಯ ವಿಜ್ಞಾನ ಕ್ಷೇತ್ರದ ಪ್ರಗತಿಯಲ್ಲಿ ಸಾಂಸ್ಥಿಕ ನಾಯಕತ್ವದ ಪಾತ್ರ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯಲಿದೆ.
ಸಸ್ಯ ವಿಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳು ಹಾಗೂ ಸಂಶೋಧನಾ ಅವಕಾಶಗಳ ಕುರಿತು ಜ್ಞಾನ ವಿನಿಮಯಕ್ಕೆ ವಿಚಾರ ಸಂಕಿರಣ ವೇದಿಕೆ ಕಲ್ಪಿಸಲಿದೆ. ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಂಯೋಜಕ ಡಾ. ರಾಕೇಶ್ಕುಮಾರ್ ತಿಳಿಸಿದ್ದಾರೆ.



