ಸಹಕಾರ ಬ್ಯಾಂಕ್ನಲ್ಲಿ ₹50 ಸಾವಿರ ಖರ್ಚು ಹೊಣೆ ಯಾರು? ಅಧ್ಯಕ್ಷ ಬಾಬು ಕೋರೆ ಪ್ರಶ್ನೆ

ಕಲಬುರಗಿ, ಸೆ.21: ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ನೌಕರರ ಪತ್ತಿನ ಸಹಕಾರ ಸಂಘದ ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ 17 ಸ್ಥಾನಗಳ ಪೈಕಿ ನಮ್ಮ ತಂಡ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಸಂಘದ ಸದಸ್ಯರು ಮತ್ತೊಮ್ಮೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಆದರೆ ಚುನಾವಣೆಯಲ್ಲಿ ಸೋತ ಕೆಲ ಅಭ್ಯರ್ಥಿಗಳು ಚುನಾವಣೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುವ ಮೂಲಕ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಬು ಕೋರೆ ಆರೋಪಿಸಿದರು.
ನಗರದ ಕೆಪಿಟಿಸಿಎಲ್ ಸಭಾಭವನದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯನ್ನು ಸಂಘದ ನಿರ್ದೇಶಕರು ನಡೆಸಿಲ್ಲ. ಕಾನೂನುಬದ್ಧವಾಗಿ ಸಹಕಾರ ಇಲಾಖೆ ಅಧಿಕಾರಿಗಳೇ ಚುನಾವಣಾ ಪ್ರಕ್ರಿಯೆ ನಡೆಸಿದ್ದಾರೆ. ಆದರೆ ಚುನಾವಣೆಯಲ್ಲಿ ಸೋತ ಕೆಲ ಅಭ್ಯರ್ಥಿಗಳು ನಕಲಿ ಮತದಾನ, ಸಮಯ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಸಹಕಾರ ಇಲಾಖೆ ಹಾಗೂ ಆಡಳಿತ ಮಂಡಳಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದು ಅಸಮಾಧಾನಕರವಾಗಿದೆ ಎಂದು ಹೇಳಿದರು.
ಕಾನೂನು ಹೋರಾಟಕ್ಕೆ ₹50 ಸಾವಿರ ವೆಚ್ಚ
ನಮ್ಮ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಎದುರಿಸಲು ಪತ್ತಿನ ಸಹಕಾರ ಸಂಘದಿಂದ ₹50 ಸಾವಿರ ವೆಚ್ಚ ಮಾಡಿ ಕಾನೂನು ಸಲಹೆಗಾರರು ಹಾಗೂ ವಕೀಲರನ್ನು ನೇಮಿಸಿ ಪ್ರಕರಣ ನಡೆಸಲಾಗುತ್ತಿದೆ. ಈ ಹಣವನ್ನು ಸದಸ್ಯರ ಹಣದಿಂದ ಏಕೆ ಖರ್ಚು ಮಾಡಬೇಕಾಯಿತು ಎಂಬುದನ್ನು ಸದಸ್ಯರು ಅರ್ಥಮಾಡಿಕೊಳ್ಳಬೇಕು. ಮತದಾರರಿಂದ ತಿರಸ್ಕೃತರಾಗಿ ಚುನಾವಣೆಯಲ್ಲಿ ಸೋತವರೇ ಇದಕ್ಕೆ ಕಾರಣರಾಗಿದ್ದಾರೆ ಎಂದು ಬಾಬು ಕೋರೆ ಹೇಳಿದರು.
ಕೆಪಿಟಿಸಿಎಲ್ ಮತ್ತು ಜೆಸ್ಕಾಂ ನೌಕರರ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 1,685 ಸದಸ್ಯರಿದ್ದಾರೆ. ಇದುವರೆಗೆ ಸಂಘದಲ್ಲಿ ಸುಮಾರು ₹66 ಕೋಟಿ ಹಣದ ವಹಿವಾಟು ನಡೆದಿದೆ. ಸಂಘದಲ್ಲಿ ಸುಮಾರು ₹3.28 ಕೋಟಿ ಲಾಭಾಂಶವಿದ್ದು, ₹34 ಕೋಟಿ ಷೇರು ಬಂಡವಾಳ, ₹1.20 ಲಕ್ಷ ಆವರ್ತಕ ಠೇವಣಿ ಹಾಗೂ ₹2 ಕೋಟಿ ನಿಶ್ಚಿತ ಠೇವಣಿ ಇದೆ. ಅರ್ಜಿ ಸಲ್ಲಿಸಿದ ಪ್ರತಿ ಸದಸ್ಯರಿಗೆ ಶೇ 10ರ ಬಡ್ಡಿದರದಲ್ಲಿ ₹10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ನೌಕರರ ಮಕ್ಕಳ ಶಿಕ್ಷಣ ಪ್ರೋತ್ಸಾಹಕ್ಕಾಗಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೌಕರರ ವೇತನ ಶ್ರೇಣಿ ಹೆಚ್ಚಳವಾದ ಬಳಿಕ ಸದಸ್ಯರಿಗೆ ₹15 ಲಕ್ಷದವರೆಗೆ ಸಾಲ ನೀಡುವ ಉದ್ದೇಶವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭಾಂಶದ ನಿವ್ವಳ ಲಾಭದೊಂದಿಗೆ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಾಬು ಕೋರೆ ತಿಳಿಸಿದರು.
ನೌಕರರ ಆರ್ಥಿಕ ಭದ್ರತೆಗೆ ಸಹಕಾರಿ ಸಂಘಗಳ ಪಾತ್ರ
ಜೆಸ್ಕಾಂ ತಾಂತ್ರಿಕ ನಿರ್ದೇಶಕ ಚಂದ್ರಕಾಂತ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೌಕರರ ಆರ್ಥಿಕ ಹಿತಾಸಕ್ತಿಗಳ ರಕ್ಷಣೆಯಲ್ಲಿ ಪತ್ತಿನ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ನೌಕರರು ತಮ್ಮ ವೇತನದ ಒಂದು ಭಾಗವನ್ನು ಉಳಿತಾಯ ಮಾಡುವ ಮೂಲಕ ಭವಿಷ್ಯದ ಆರ್ಥಿಕ ಭದ್ರತೆಗೆ ಬುನಾದಿ ಹಾಕಿಕೊಳ್ಳಬೇಕು. ಅಗತ್ಯ ಸಂದರ್ಭಗಳಲ್ಲಿ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ನೌಕರರ ಕುಟುಂಬಗಳ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಸಹಕಾರ ಸಂಘಗಳು ಮಾಡುತ್ತಿವೆ ಎಂದು ಹೇಳಿದರು.
ಸಂಘದ ಅಭಿವೃದ್ಧಿಗಾಗಿ ಸದಸ್ಯರು ಹಾಗೂ ಪದಾಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಗೆ ಒತ್ತು
ಮುಖ್ಯ ಹಣಕಾಸು ಅಧಿಕಾರಿ ರಾಜಕ್ ಮೀಯಾ, ಅಧೀಕ್ಷಕ ಎಂಜಿನಿಯರ್ ಖಂಡಪ್ಪ ಸೋನಾವಣೆ, ಉಪ ಲೆಕ್ಕನಿಯಂತ್ರಣಾಧಿಕಾರಿ ರಾಘವೇಂದ್ರ, ಚಾರ್ಟರ್ಡ್ ಅಕೌಂಟೆಂಟ್ ಎಂ.ವಿ. ಮಹಾಂತಗೋಳ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಂಸ್ಥೆಯ ಜೆಸ್ಕಾಂ ಕಂಪನಿ ಉಪಾಧ್ಯಕ್ಷ ಶಿವಾನಂದ ತೋಳೆ, ಕೇಂದ್ರ ಸಮಿತಿ ಸದಸ್ಯ ಗಣಪತಿ ಮರಪಳ್ಳಿ, ಸಹಕಾರ ಪತ್ತಿನ ಸಂಘದ ಉಪಾಧ್ಯಕ್ಷ ಅನೀಲಕುಮಾರ ಶೇರಿಕಾರ್ ಸೇರಿದಂತೆ ಹಲವರು ಮಾತನಾಡಿದರು.
ಸಂಸ್ಥೆಯಲ್ಲಿ ಆಡಂಬರದ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ನಿಯಮಬದ್ಧತೆಗೆ ಆದ್ಯತೆ ನೀಡಲಾಗುತ್ತಿದೆ. ಸದಸ್ಯರ ವಿಶ್ವಾಸವನ್ನು ಉಳಿಸಿಕೊಂಡು ಸಂಘವನ್ನು ಮುನ್ನಡೆಸುವುದು ಎಲ್ಲ ಪದಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಬಡ್ಡಿದರವನ್ನು ಶೇ 12ರಿಂದ ಶೇ 10ಕ್ಕೆ ಇಳಿಸಲಾಗಿದೆ. ಸಂಘದ ಯಾವುದೇ ಸದಸ್ಯರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ₹1 ಲಕ್ಷ ಪರಿಹಾರಧನ ನೀಡಲಾಗುತ್ತಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ನೌಕರರ ಮಕ್ಕಳಿಗೆ ಪ್ರೋತ್ಸಾಹಧನದ ಮೂಲಕ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಾರ್ಷಿಕ ವರದಿ ಮಂಡನೆ
ರಾಜಕುಮಾರ್ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಉದ್ದೇಶ, ಇದುವರೆಗೆ ಕೈಗೊಂಡಿರುವ ಕಾರ್ಯಚಟುವಟಿಕೆಗಳು ಹಾಗೂ ಸದಸ್ಯರಿಗೆ ಒದಗಿಸಲಾಗುತ್ತಿರುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ನಾಗರಾಜ ಕುಂಬಾರ ಅವರು ಕಳೆದ ವರ್ಷದ ಸಂಘದ ಕಾರ್ಯಚಟುವಟಿಕೆಗಳು, ಹಣಕಾಸಿನ ವ್ಯವಹಾರಗಳು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ವಾರ್ಷಿಕ ವರದಿ ಮಂಡಿಸಿದರು. ವರದಿ ಕುರಿತು ಸಭೆಯಲ್ಲಿ ಸದಸ್ಯರು ಚರ್ಚಿಸಿ ಅಗತ್ಯ ಸಲಹೆಗಳನ್ನು ನೀಡಿದರು. ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆಯೂ ಚರ್ಚೆ ನಡೆಯಿತು.
ಚಂದ್ರಶೇಖರಯ್ಯ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಾರ್ಷಿಕ ವರದಿ ವಾಚನದ ಬಳಿಕ ವಂದಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಅನೀಲಕುಮಾರ ಶೇರಿಕಾರ್, ಅಯ್ಯಣ್ಣ ರೆಡ್ಡಿ, ಸಂತೋಷ ವಡಕಿ, ನಾಗರಾಜ್ ಕುಂಬಾರ, ಅನಿಲ ಮುಗಳಿ, ಧರ್ಮರಾಯ ಪಾಟೀಲ, ವಿನೋದ ಸಿಂಗ್, ಸಂದೀಪ್ ಪಾಟೀಲ, ಶರಣಗೌಡ ಬಿರಾದಾರ್, ನಿಂಗಣ್ಣ ಹಾಲಕಿ ಸೇರಿದಂತೆ ಅಧಿಕಾರಿಗಳು, ಕೇಂದ್ರ ಸಮಿತಿ ಸದಸ್ಯರು, ನೌಕರರು, ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



