₹1 ಲಕ್ಷ ನಗದು ಇದ್ದ ಬ್ಯಾಗ್ ವಾರಸುದಾರರಿಗೆ ಒಪ್ಪಿಸಿದ ಕಫೆ ಮಾಲೀಕರ ಪ್ರಾಮಾಣಿಕತೆ
ಕಫೆಯಲ್ಲಿ ಮರೆತುಹೋದ ನಗದು ಮತ್ತು ದಾಖಲೆಗಳಿದ್ದ ಬ್ಯಾಗ್‌ನ್ನು ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ಒಪ್ಪಿಸಿ ಮಾದರಿಯಾದ ಮಾಲೀಕ

ಅಫಜಲಪುರ ಪಟ್ಟಣದ ಕರುನಾಡು ಕಫೆಯ ಮಾಲೀಕರು ಗ್ರಾಹಕರೊಬ್ಬರು ಕಫೆಯಲ್ಲಿ ಮರೆತುಹೋದ ಸುಮಾರು ₹1 ಲಕ್ಷ ನಗದು ಹಾಗೂ ಪ್ರಮುಖ ದಾಖಲೆಗಳಿದ್ದ ಬ್ಯಾಗ್‌ನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ತಲುಪಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಜುಲೈ 20ರಂದು ಒಎನ್‌ಜಿಸಿ ಸಂಸ್ಥೆಯ ವಿಜಿಲೆನ್ಸ್ ಅಧಿಕಾರಿಯೊಬ್ಬರು ಕಫೆಗೆ ಭೇಟಿ ನೀಡಿದ ವೇಳೆ ತಮ್ಮ ಬ್ಯಾಗ್‌ನ್ನು ಅಲ್ಲಿಯೇ ಮರೆತು ತೆರಳಿದ್ದರು. ಬ್ಯಾಗ್‌ನಲ್ಲಿ ಸುಮಾರು ₹1 ಲಕ್ಷ ನಗದು ಸೇರಿದಂತೆ ಹಲವು ಪ್ರಮುಖ ದಾಖಲೆಗಳಿದ್ದವು.
ಸ್ವಲ್ಪ ಸಮಯದ ಬಳಿಕ ಕಫೆ ಮಾಲೀಕರಿಗೆ ಬ್ಯಾಗ್ ಕಂಡುಬಂದಿದ್ದು, ಅದರಲ್ಲಿದ್ದ ಹಣ ಅಥವಾ ವಸ್ತುಗಳಿಗೆ ಯಾವುದೇ ಆಸೆಪಡದೆ ತಕ್ಷಣವೇ ಬ್ಯಾಗ್ ಹಾಗೂ ಅದರಲ್ಲಿದ್ದ ನಗದು ಸಹಿತ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಕಫೆ ಮಾಲೀಕರ ಪ್ರಾಮಾಣಿಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೊಲೀಸ್ ಅಧಿಕಾರಿಗಳು ಅವರನ್ನು ಠಾಣೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಅಗತ್ಯ ಪರಿಶೀಲನೆ ನಡೆಸಿ ಬ್ಯಾಗ್ ಹಾಗೂ ಅದರಲ್ಲಿದ್ದ ನಗದು ಮತ್ತು ದಾಖಲೆಗಳನ್ನು ಸಂಬಂಧಿಸಿದ ವಾರಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಇಂತಹ ಪ್ರಾಮಾಣಿಕ ನಡೆಗಳು ಸಮಾಜದಲ್ಲಿ ಪರಸ್ಪರ ನಂಬಿಕೆಯನ್ನು ಹೆಚ್ಚಿಸುವುದರ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗುತ್ತವೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟರು. ಕಫೆ ಮಾಲೀಕರ ಈ ಮಾನವೀಯ ಹಾಗೂ ಪ್ರಾಮಾಣಿಕ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



