371(ಜೆ) ಮೀಸಲಾತಿಗೆ ವಿಜಯಪುರ ಜಿಲ್ಲೆ ಸೇರ್ಪಡೆಗೆ ಒತ್ತಾಯ
ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ

ವಿಜಯಪುರ, ಜು.29: 371(ಜೆ) ಮೀಸಲಾತಿಯಿಂದ ಹೊರಗುಳಿದಿರುವ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿನೋದ್ ಖೇಡ್ ಹಾಗೂ ಮುಖಂಡ ಮಲ್ಲಣಗೌಡ ಪಾಟೀಲ ಬರಟಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಅವರು, ವಿಜಯಪುರ ಜಿಲ್ಲೆ ಐತಿಹಾಸಿಕವಾಗಿ ಹೈದರಾಬಾದ್ ನಿಜಾಮರ ಆಡಳಿತದ ಭಾಗವಾಗಿತ್ತು ಎಂಬುದಕ್ಕೆ ಸರ್ಕಾರದ ಅಧಿಕೃತ ದಾಖಲೆಗಳಿವೆ ಎಂದು ತಿಳಿಸಿದರು. 1744ರಿಂದ 1746ರ ಅವಧಿಯ ಆಡಳಿತ ಬದಲಾವಣೆಗಳ ಉಲ್ಲೇಖವಿದ್ದು, ಆ ಹಿನ್ನೆಲೆಯನ್ನು ಪರಿಗಣಿಸಿ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದೊಂದಿಗೆ ವಿಜಯಪುರ ಜಿಲ್ಲೆಯ ಐತಿಹಾಸಿಕ, ಆಡಳಿತಾತ್ಮಕ ಹಾಗೂ ಸಾರಿಗೆ ಸಂಬಂಧಗಳು ಈಗಾಗಲೇ ಇದ್ದು, ನ್ಯಾಯಾಂಗ ವ್ಯವಸ್ಥೆಯೂ ಕಲಬುರಗಿ ಉಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಆದರೂ ಜಿಲ್ಲೆಯನ್ನು 371(ಜೆ) ಮೀಸಲಾತಿಗೆ ಸೇರಿಸದೇ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.
ನಂಜುಂಡಪ್ಪ ವರದಿಯಲ್ಲಿಯೂ ವಿಜಯಪುರ ಜಿಲ್ಲೆಯನ್ನು ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದ್ದು, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಜಿಲ್ಲೆಯ ಜನರು ಇನ್ನೂ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನೂ 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ನೀಡಿದ್ದ ಭರವಸೆಯಂತೆ ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರ ತನ್ನ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿ ನ್ಯಾಯ ಒದಗಿಸಬೇಕು ಎಂದು ಮುಖಂಡರು ಆಗ್ರಹಿಸಿದರು.



