ರಾಜ್ಯ

ಸಾಲದ ಬಾಧೆಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶಂಕೆ

ಗಂಗಾವತಿ: ನಗರದ ಪ್ರಶಾಂತನಗರದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಸಾಲದ ಬಾಧೆಯೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.

ಮೃತರನ್ನು ಪ್ರಕಾಶ್ ರಾಯ್ಕರ್ (54), ಪತ್ನಿ ಪ್ರಭಾ (46) ಹಾಗೂ ಪುತ್ರ ಶಶಾಂಕ್ (21) ಎಂದು ಗುರುತಿಸಲಾಗಿದೆ. ಶಶಾಂಕ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ನಾಲ್ಕು ದಿನಗಳ ಹಿಂದೆ ಗಂಗಾವತಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪ್ರಕಾಶ್ ರಾಯ್ಕರ್ ಅವರು ಆಭರಣ ಮಳಿಗೆ ನಡೆಸುತ್ತಿದ್ದರು. ಬ್ಯಾಂಕ್ ಸಾಲದ ಹಿನ್ನೆಲೆ 2021ರಲ್ಲಿ ತಮ್ಮ ಮನೆಯನ್ನು ನಾಗರಾಜ್ ಅವರಿಗೆ ಮಾರಾಟ ಮಾಡಿದ್ದರು. ಬಳಿಕ ಮನೆ ಖರೀದಿಸಿದ ನಾಗರಾಜ್ ಕೂಡ ಅದೇ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಯಾಗದ ಕಾರಣ ಬ್ಯಾಂಕ್ ಅಧಿಕಾರಿಗಳು ಫೆಬ್ರುವರಿಯಲ್ಲಿ ಮನೆಯನ್ನು ವಶಪಡಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕಾಶ್ ಕುಟುಂಬವು ಕಳೆದ ಫೆಬ್ರುವರಿವರೆಗೆ ಅದೇ ಮನೆಯಲ್ಲಿ ವಾಸವಿದ್ದು, ನಂತರ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. ಗುರುವಾರ ರಾತ್ರಿ ಕಾರಿನಲ್ಲಿ ಬಂದ ಕುಟುಂಬದ ಮೂವರು, ತಾವು ಹಿಂದೆ ಮಾರಾಟ ಮಾಡಿದ್ದ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಗಂಗಾವತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಪ್ರಕಾಶ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button