ಜಿಲ್ಲಾಸುದ್ದಿ

ಜಮೀನು ಖರೀದಿಯಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಬಡದಾಳ್ ಆರೋಪ

ಕಲಬುರ್ಗಿ, ಜೂ.೩೦- ರಾಜ್ಯದಲ್ಲಿ ಸರ್ಕಾರವು ಜಮೀನು ಖರೀದಿಯಲ್ಲಿಯೂ ಸಹ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಾಜಕುಮಾರ್ ಬಡದಾಳ್ ಅವರು ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ರೈತರ ಜಮೀನು ಖರೀದಿಗೆ ಕೋಟ್ಯಾಂತರ ರೂ.ಗಳ ಬೆಲೆಯನ್ನು ಕಟ್ಟಲಾಗುತ್ತದೆ. ಆದಾಗ್ಯೂ, ಉತ್ತರ ಕರ್ನಾಟಕದ ಜಮೀನಿಗೆ ಕೇವಲ ಹತ್ತುಲಕ್ಷ ರೂ.ಗಳವರೆಗೆ ಬೆಲೆ ನಿಗದಿಪಡಿಸಲಾಗುತ್ತಿದೆ ಎಂದು ದೂರಿದರು.

ಕರ್ನಾಟಕ ರಾಜ್ಯದಲ್ಲಿ ಹಲವಾರು ಯೋಜನೆಗಳಿಗೆ ಜಮೀನು ಖರೀದಿಸಲಾಗುತ್ತಿದೆ. ಈಗ ರಾಜ್ಯ ಸರ್ಕಾರ ಟೌನ್‌ಶಿಪ್‌ಗಾಗಿ ಬಿಡದಿಯಲ್ಲಿ ಸಾವಿರ ಎಕರೆ ಖರೀದಿ ಮಾಡಲು ಹೊರಟಿದ್ದಾರೆ. ಆದಾಗ್ಯೂ, ಟೌನ್‌ಶಿಪ್‌ಗೆ ರೈತರ ವಿರೋಧವಿದೆ. ಸರ್ಕಾರ ಇನ್ನೂ ಹೆಚ್ಚು ಹಣ ಕೊಡುವುದಾಗಿ ರೈತರಲ್ಲಿ ಕೇಳಿಕೊಳ್ಳುತ್ತಿದೆ. ಅಲ್ಲಿಯ ರೈತರ ಜೀವನ ಆ ಜಮೀನಿನ ಮೇಲೆ ನಿಂತಿದೆ. ಸರ್ಕಾರ ಟೌನಶಿಪ್ ಕಾರ್ಯವನ್ನು ಕೈಬಿಟ್ಟು ರೈತರ ಜೀವನಕ್ಕೆ ಅನೂಕೂಲವಾಗುವಂತ ಕೆಲಸಗಳು ಮಾಡಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಅಖಂಡ ಕರ್ನಾಟಕ ಇದಯೋ? ಅಥವಾ ಕರ್ನಾಟಕದಲ್ಲಿ ವ್ಯತ್ಯಾಸಗಳು ಇವೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ರೈತರಿಂದ ಜಮೀನು ಸರ್ಕಾರ ತೆಗೆದುಕೊಳ್ಳುವಾಗ (ಖರೀದಿ ಮಾಡುವಾಗ) ಪ್ರತಿ ಎಕರೆ ಕೋಟಿ ವ್ಯವಹಾರದಲ್ಲಿರುತ್ತದೆ. ಅದೇ ಜಮೀನಿಗೆ ಉತ್ತರ ಕರ್ನಾಟಕದಲ್ಲಿ ೧-೧೦ ಲಕ್ಷದವರೆಗೆ ಮಾತ್ರ ಸೀಮಿತವಾಗಿರುತ್ತದೆ, ಯಾಕೆ ಈ ರೀತಿ ತಾರತಮ್ಯ ಮಾಡುತ್ತಿರಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಯಾವುದಾದರು ಅನಾಹುತ ಪ್ರಕೃತಿ ವಿಕೋಪವಾದಾಗ ದಕ್ಷಿಣ ಕರ್ನಾಟಕ ರೈತರಿಗೆ ಒಂದು ಪರಿಹಾರ, ಉತ್ತರ ಕರ್ನಾಟಕ ರೈತರಿಗೆ ಇನ್ನೊಂದು ಪರಿಹಾರ ನೀಡಲಾಗುತ್ತಿದೆ. ಪರಿಹಾರದಲ್ಲೂ ಕೂಡಾ ತಾರತಮ್ಯ ಮಾಡಲಾಗುತ್ತಿದೆ. ಅಖಂಡ ಕರ್ನಾಟಕ ಒಂದೇ ಎಂದು ಸಾರುವ ಸರ್ಕಾರ ವ್ಯತ್ಯಾಸಗಳು ಏಕೆ ಮಾಡುತ್ತಿದೆ? ನಾವು ನೋಡಿ-ನೋಡಿ ಬೇಸತ್ತು ಹೋಗಿದ್ದೆವೆ. ಅದಕ್ಕಾಗಿ ಸರ್ಕಾರಕ್ಕೆ ಪ್ರತ್ಯೇಕ ಕರ್ನಾಟಕ ಅವಶ್ಯಕತೆ ಇದೆ ಎಂದು ಉತ್ತರ ಕರ್ನಾಟಕದವರಿಗೆ ಅರ್ಥವಾಗುತ್ತಿದೆ ಎಂದು ಅವರು ಎಚ್ಚರಿಸಿದರು.

ಇನ್ನು ಮುಂದೆ ಸರ್ಕಾರದ ಪರವಾಗಿ ಡೆವಲೆಪಮೆಂಟ್‌ಗೋಸ್ಕರ ನಮ್ಮಿಂದ ಜಮೀನು ಖರೀದಿ ಮಾಡುವಾಗ ಕೋಟಿ ವ್ಯವಹಾರದಲ್ಲಿ ಇದ್ದರೆ ಮಾತ್ರ ನಾವು ಜಮೀನು ನೀಡುತ್ತೇವೆ. ಇಲ್ಲದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡಬೇಕಾಗುತ್ತದೆ. ಟೌನಶಿಪ್ ಕೈ ಬಿಡದೆ ಹೋದರೆ ರೈತರು ಮತ್ತು ಹಲಾವಾರು ಸಂಘಟಣೆಗಳು ಕೂಡಿ ಪ್ರತ್ಯೇಕ ರಾಜ್ಯದ ಸಲುವಾಗಿ ಹೋರಾಟ ಪ್ರಾರಂಭ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸುನೀಲ್ ಗಾಜರೆ, ಗಂಗಾಧರ್ ಪಂಚಾಳ್, ಹಣಮಂತರಾವ್ ಕಂದಳಿ, ನಿಂಗಣ್ಣ ವಾರದ್, ಸಂಜು ಮಡಕಿ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button