ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ಅ.25, 26ರಂದು ರಾಷ್ಟ್ರೀಯ ಬಂಜಾರಾ ಸಾಂಸ್ಕೃತಿಕ ಸಮ್ಮೇಳನ

ಎಂಟು ರಾಜ್ಯಗಳಿಂದ 105ಕ್ಕೂ ಅಧಿಕ ಕಲಾವಿದರು ಭಾಗಿ; ಕಲ್ಯಾಣ ಕರ್ನಾಟಕದ 25 ಕಲಾವಿದರಿಗೂ ಅವಕಾಶ

ಕಲಬುರಗಿ, ಸೆ.25: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಅಕ್ಟೋಬರ್ 25 ಮತ್ತು 26ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಬಂಜಾರಾ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಗೋರ ಬಂಜಾರಾ ಸಂಗೀತ ಕಲಾ ಸಂಘದ ಅಧ್ಯಕ್ಷ ಸೋಮನಾಥ ಎಂ. ಜಾಧವ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ದೇಶದ ಎಂಟು ರಾಜ್ಯಗಳಿಂದ ಸುಮಾರು 105ಕ್ಕೂ ಅಧಿಕ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಗುಜರಾತ್, ಕೇರಳ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಂದ ಸುಮಾರು 25 ಮಂದಿ ಪ್ರಸಿದ್ಧ ಕಲಾವಿದರು ಸಹ ಸಮ್ಮೇಳನದಲ್ಲಿ ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಂಜಾರಾ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಪರಿಚಯಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸಮ್ಮೇಳನಕ್ಕೆ ಸಮಾಜದ ಪೂಜ್ಯರು ಹಾಗೂ ರಾಜಕೀಯ ಗಣ್ಯರು ಆಗಮಿಸಲಿದ್ದಾರೆ. ವಿವಿಧ ಕಲಾತಂಡಗಳ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಮ್ಮೇಳನದ ಮೂಲಕ ಬಂಜಾರಾ ಸಮುದಾಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಗೀತ, ನೃತ್ಯ ಹಾಗೂ ಕಲಾ ವೈವಿಧ್ಯವನ್ನು ಜನರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನೂರಾಸಿಂಗ್ ಆಡೆ, ವೀರಶೆಟ್ಟಿ ರಾಠೋಡ್, ಗೋವಿಂದ ರಾಠೋಡ್, ಸಾವಿತ್ರಿಬಾಯಿ ಜಾಧವ್, ರವಿತಾಬಾಯಿ ರಾಠೋಡ್, ಶಿವರಾಮ್ ಚವಾಣ್, ವಿಜಯ್ ಚವಾಣ್, ಗೋವಿಂದ್ ಚವಾಣ್, ರಾಜು ಚವಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button