ಸರ್ಕಾರಿ ಶಾಲೆಗೆ ಐದು ನೂತನ ಕೊಠಡಿಗಳ ಉದ್ಘಾಟನೆ: ಶೇ.100 ಫಲಿತಾಂಶಕ್ಕೆ ಸಚಿವ ಶರಣಪ್ರಕಾಶ ಪಾಟೀಲ ಕರೆ
₹72.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಗಳ ಲೋಕಾರ್ಪಣೆ; ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚನೆ

ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಪಂಚಾಯತ್ ರಾಜ್ ಇಲಾಖೆಯ 2024-25ನೇ ಸಾಲಿನ ಡಿಡಿಪಿ ಯೋಜನೆಯಡಿ ಪಟ್ಟಣದ ವಿದ್ಯಾನಗರ-2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹72.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಐದು ಹೆಚ್ಚುವರಿ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಕಟ್ಟಡಗಳ ನಿರ್ಮಾಣದೊಂದಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಆದರೆ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಶೇ.100 ಫಲಿತಾಂಶ ತರುವ ಜವಾಬ್ದಾರಿಯನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಾಲೆಗಳಲ್ಲಿ ಶೈಕ್ಷಣಿಕ ಚಿಂತನಾ ಕೂಟಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಣೆ, ಆತ್ಮವಿಶ್ವಾಸ ವೃದ್ಧಿ ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಾಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೂ ಸಚಿವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



