ಜಿಲ್ಲಾಸುದ್ದಿ

ತಳವಾರರಿಗೆ ಎಸ್ಟಿ ಪ್ರಮಾಣಪತ್ರ ನೀಡಲು ಅಡ್ಡಿಪಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಜೇವರ್ಗಿ, ಸೆ.19: ತಳವಾರ ಸಮುದಾಯದ ಅರ್ಹರಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣಪತ್ರ ನೀಡುವ ಸರ್ಕಾರಿ ಪ್ರಕ್ರಿಯೆಗೆ ಅಡ್ಡಿಪಡಿಸುವವರು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಮುಖಂಡ ರೇವಣಸಿದ್ದ ಕಮನಮನಿ ಒತ್ತಾಯಿಸಿದರು.

ಈ ಕುರಿತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಅವರು, ಸರ್ಕಾರದ ಆದೇಶ ಅಥವಾ ಅಧಿಸೂಚನೆಗೆ ಯಾರಿಗಾದರೂ ಆಕ್ಷೇಪಣೆಗಳಿದ್ದರೆ, ಅವರು ಕಾನೂನುಬದ್ಧ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ತಳವಾರ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೈಜ ತಳವಾರ ಸಮುದಾಯದ ಅರ್ಹ ವ್ಯಕ್ತಿಗಳಿಗೆ ಸ್ಥಳೀಯ ಪಂಚನಾಮೆ ವರದಿ ಹಾಗೂ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿ, ನಿಗದಿತ ಕಾಲಮಿತಿಯೊಳಗೆ ಎಸ್ಟಿ ಜಾತಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಅರ್ಹ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಯಾವುದೇ ಅರ್ಹ ವ್ಯಕ್ತಿಗೆ ಅನಗತ್ಯ ವಿಳಂಬವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಭೀಮರಾಯ ಜನಿವಾರ, ಮೈಲಾರಿ ಗುಡೂರ್, ಮಲ್ಲೇಶಪ್ಪಗೌಡ ಮಾಮನೂರು, ತಳವಾರ ಮಹಾಸಭಾ ಅಧ್ಯಕ್ಷ ಗಿರೀಶ್ ತುಂಬಗಿ, ಸಂತೋಷ ಜೈನಾಪುರ, ಸಿದ್ದಣ್ಣಗೌಡ ಮಾಮನೂರು, ರಾಜೇಂದ್ರ ರಾಜವಾಳ್, ಭಾಗೇಶ ಹೊತ್ತಿನಮಡು, ಬಸೂ ತಳವಾರ, ಮರೇಪ್ಪ ತಳವಾರ, ರಾಜು ತಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button