ಜಿಲ್ಲಾಸುದ್ದಿ

ರೇವಣಸಿದ್ಧೇಶ್ವರ ದೇವಸ್ಥಾನ ಕಲಬುರಗಿ ಉಪವಿಭಾಗದ ವ್ಯಾಪ್ತಿಗೆ: ಸುಭಾಷ್ ಬಿರಾದಾರ್ ಸಂತಸ

ಕಮಲಾಪುರ, ನ.16: ಕಾಳಗಿ ತಾಲ್ಲೂಕಿನ ರೇವಗಿ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನವನ್ನು ಕಲಬುರಗಿ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ಒಳಪಡಿಸಿರುವುದಕ್ಕೆ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ಸುಭಾಷ್ ಬಿರಾದಾರ್ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇವಣಸಿದ್ಧೇಶ್ವರ ದೇವಸ್ಥಾನವು ಅರನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇಡೀ ಗ್ರಾಮ ಪಂಚಾಯಿತಿಯು ಕಮಲಾಪುರ ತಾಲ್ಲೂಕಿಗೆ ಸೇರ್ಪಡೆಯಾಗಿತ್ತು. ಆದರೆ ದೇವಸ್ಥಾನದ ಆಡಳಿತ ಮಾತ್ರ ಸೇಡಂ ಉಪವಿಭಾಗಾಧಿಕಾರಿಗಳ ಅಧೀನದಲ್ಲಿತ್ತು. ಇದರಿಂದ ಆಡಳಿತಾತ್ಮಕವಾಗಿ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು ಎಂದು ತಿಳಿಸಿದರು.

ಈ ಸಮಸ್ಯೆ ಪರಿಹರಿಸುವಂತೆ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ವತಿಯಿಂದ ರಾಜ್ಯ ಸರ್ಕಾರ, ಮುಜರಾಯಿ ಇಲಾಖೆ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಹೋರಾಟ ಸಮಿತಿಯ ಮನವಿಗೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಸ್ಥಾನದ ಆಡಳಿತವು ಇನ್ನು ಮುಂದೆ ಕಲಬುರಗಿ ಉಪವಿಭಾಗದ ವ್ಯಾಪ್ತಿಗೆ ಬಂದಿರುವುದು ಸಂತಸದ ಸಂಗತಿಯಾಗಿದೆ. ಇದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.

ದೇವಸ್ಥಾನದ ವತಿಯಿಂದ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ, ಸಿಬಿಎಸ್‌ಇ ಮಾದರಿಯ ಶಾಲೆಯನ್ನೂ ಆರಂಭಿಸುವ ಸಾಧ್ಯತೆಗಳಿವೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ನೆರವಾಗಲಿದೆ ಎಂದು ಸುಭಾಷ್ ಬಿರಾದಾರ್ ಅಭಿಪ್ರಾಯಪಟ್ಟರು.

Related Articles

Leave a Reply

Your email address will not be published. Required fields are marked *

Back to top button