ಕಬ್ಬಿನ ಇಳುವರಿ ಹೆಚ್ಚಿಸಲು ಹೊಸ ತಂತ್ರಜ್ಞಾನ ಬಳಸಿ: ಡಾ. ಸಂಜೀವ್ ಮಾನೆ ಕರೆ

ಬೆಂಗಳೂರು, ನ.16: ಕಬ್ಬಿನ ಇಳುವರಿ ಹೆಚ್ಚಿಸಲು ರೈತರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದರೆ ಹೆಚ್ಚಿನ ಇಳುವರಿ ಮತ್ತು ಲಾಭ ಗಳಿಸಲು ಸಾಧ್ಯ ಎಂದು ಮಹಾರಾಷ್ಟ್ರದ ಕೃಷಿರತ್ನ ಪ್ರಶಸ್ತಿ ಪುರಸ್ಕೃತ ಡಾ. ಸಂಜೀವ್ ಮಾನೆ ಹೇಳಿದರು.
ನಗರದಲ್ಲಿ ನಡೆದ ಕಬ್ಬು ಬೆಳೆಗಾರರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 220 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 140 ಸಹಕಾರಿ ಕಾರ್ಖಾನೆಗಳಾಗಿವೆ. ವಿವಿಧ ರಾಜ್ಯಗಳಲ್ಲಿ ಕಬ್ಬಿನ ಖರೀದಿ ದರದಲ್ಲಿ ವ್ಯತ್ಯಾಸವಿದೆ. ರೈತರು ಹೊಸ ತಂತ್ರಜ್ಞಾನ ಬಳಸಿಕೊಂಡು ಕಬ್ಬಿನ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಮ್ಮ ಕಬ್ಬಿನ ಬೆಳೆಯಲ್ಲಿ ಪ್ರತಿ ಎಕರೆಗೆ 170 ಟನ್ ಇಳುವರಿ ಪಡೆದು ವಿಶ್ವದಾಖಲೆ ನಿರ್ಮಿಸಿರುವುದನ್ನು ಉಲ್ಲೇಖಿಸಿದ ಅವರು, ಕಬ್ಬಿನ ಬೆಳೆಗೆ ಬರಗಾಲದ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗದಂತೆ ಹನಿ ನೀರಾವರಿ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ರಸದಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಸಕ್ಕರೆ ಉತ್ಪಾದಿಸುವ ಬದಲು ಮೊಲಾಸಿಸ್ನಿಂದ ಎಥನಾಲ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದರಿಂದ ಕಾರ್ಖಾನೆಗಳಿಗೆ ಹೆಚ್ಚು ಲಾಭ ದೊರೆಯುತ್ತಿದ್ದರೂ ಸಕ್ಕರೆ ಇಳುವರಿ ಕಡಿಮೆಯಾಗುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ಮಹಾರಾಷ್ಟ್ರದಲ್ಲಿ ರೈತರಿಗೆ ಕಬ್ಬಿನ ಹಣವನ್ನು ಸುಮಾರು 10 ದಿನಗಳಲ್ಲಿಯೇ ಪಾವತಿಸಲಾಗುತ್ತಿದೆ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಮುಖಂಡ ಹರಿಯಾಣದ ಅಭಿಮನ್ಯು ಕೊಹರ್ ಮಾತನಾಡಿ, ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 6,000 ರೂ. ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಪಂಜಾಬ್ನಲ್ಲಿ ಪ್ರತಿ ಟನ್ಗೆ 4,840 ರೂ. ದರ ನಿಗದಿಪಡಿಸಿರುವುದನ್ನು ಉಲ್ಲೇಖಿಸಿದ ಅವರು, ದೇಶದಾದ್ಯಂತ ಕಬ್ಬು ಬೆಳೆಗಾರರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮೇಲೆ ಒತ್ತಡ ಹೇರಲು ಸಾಧ್ಯ ಎಂದು ಹೇಳಿದರು.
ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಜುವೀರ್ ಸಿಂಗ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಸುಮಾರು 50 ಲಕ್ಷ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಅಲ್ಲಿ ಕಬ್ಬು ಕಟಾವಾದ ಬಳಿಕ ಸುಮಾರು 18 ತಿಂಗಳವರೆಗೆ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ 14 ದಿನಗಳ ನಂತರ ಕಬ್ಬಿನ ಹಣ ಪಾವತಿಸುವ ಕಾರ್ಖಾನೆಗಳು ಬಡ್ಡಿಯನ್ನೂ ಸೇರಿಸಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿರುವ 82 ಸಕ್ಕರೆ ಕಾರ್ಖಾನೆಗಳಿಗೆ ವರ್ಷಕ್ಕೆ ಕನಿಷ್ಠ 10 ಕೋಟಿ ಟನ್ ಕಬ್ಬು ಅಗತ್ಯವಿದೆ. ಆದರೆ ಬರಗಾಲದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ರಾಜ್ಯದಲ್ಲಿ ರೈತರು ಸುಮಾರು 5 ಕೋಟಿ ಟನ್ ಕಬ್ಬು ಮಾತ್ರ ಬೆಳೆದಿದ್ದಾರೆ. ಕಬ್ಬಿನ ಕೊರತೆಯಿಂದ ಕಾರ್ಖಾನೆಗಳ ನಡುವೆ ಪೈಪೋಟಿ ಉಂಟಾಗಿ ಹೆಚ್ಚಿನ ದರ ನೀಡಿ ಕಬ್ಬು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಕಬ್ಬಿನ ಇಳುವರಿ ಆಧರಿಸಿ ಪ್ರತಿ ಟನ್ಗೆ 4,200, 4,000, 3,800 ಹಾಗೂ 3,400 ರೂ. ದರಗಳನ್ನು ಕಾರ್ಖಾನೆಗಳು ಘೋಷಿಸಿವೆ. ಹರಿಯಾಣದಲ್ಲಿ ಪ್ರತಿ ಟನ್ಗೆ 4,840 ರೂ. ಮತ್ತು ತಮಿಳುನಾಡಿನಲ್ಲಿ 4,000 ರೂ. ದರ ನಿಗದಿಪಡಿಸಲಾಗಿದೆ. ಅಲ್ಲಿನ ಸರ್ಕಾರಗಳೇ ರಾಜ್ಯ ಸಲಹಾ ದರ ನಿಗದಿಪಡಿಸಿವೆ. ಆದರೆ ಕರ್ನಾಟಕ ಸರ್ಕಾರ ಕಬ್ಬಿನ ರಾಜ್ಯ ಸಲಹಾ ದರ ನಿಗದಿಪಡಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಅವರು ದೂರಿದರು.
ಪ್ರಸಕ್ತ ಸಾಲಿನ ಕಬ್ಬಿನ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಪ್ರತಿ ಟನ್ಗೆ 3,650 ರೂ. ಇದ್ದು, ಕಬ್ಬು ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಈ ದರ ಕಡಿಮೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಎಫ್ಆರ್ಪಿ ದರವನ್ನು ಪ್ರತಿ ಟನ್ಗೆ 4,500 ರೂ.ಗೆ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದರು.
ಎಫ್ಆರ್ಪಿ ದರವನ್ನು ರೈತರ ಹೊಲದಲ್ಲಿಯೇ ದೊರೆಯುವ ದರವಾಗಿ ನಿಗದಿಪಡಿಸಬೇಕು. ಕಬ್ಬು ಕಟಾವು, ಸಾಗಣೆ ವೆಚ್ಚದ ಹೆಸರಿನಲ್ಲಿ ರೈತರ ಶೋಷಣೆಯಾಗುವುದನ್ನು ತಡೆಯಬೇಕು. 2010ರಿಂದ ಕಬ್ಬಿನ ಎಫ್ಆರ್ಪಿ ದರ ನಿಗದಿಯಲ್ಲಿ ಸಕ್ಕರೆ ಇಳುವರಿ ಪ್ರಮಾಣವನ್ನು ಶೇ.8.5ರಿಂದ ಶೇ.10.25ಕ್ಕೆ ಹೆಚ್ಚಿಸಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಮಾನದಂಡವನ್ನು ಮರುಪರಿಶೀಲಿಸಿ ಶೇ.8.5ರ ಆಧಾರದಲ್ಲಿ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಹಿಂದಿನ ವರ್ಷಗಳ ಕಬ್ಬು ಪೂರೈಕೆದಾರರ ಆಧಾರದಲ್ಲಿ ಪ್ರಸಕ್ತ ಸಾಲಿನ ರೈತರಿಗೆ ಎಫ್ಆರ್ಪಿ ಹಣ ಪಾವತಿಸುವ ಪದ್ಧತಿ ಅವೈಜ್ಞಾನಿಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಅವರ ಉತ್ಪನ್ನಕ್ಕೆ ಅನುಗುಣವಾಗಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.
ಕಬ್ಬಿನಿಂದ ಉತ್ಪಾದನೆಯಾಗುವ ಸಕ್ಕರೆಯ ಶೇ.7ರಷ್ಟು ಪ್ರಮಾಣ ವಾಣಿಜ್ಯ ಬಳಕೆಗೆ ಹಾಗೂ ಶೇ.25ರಷ್ಟು ಸಾಮಾನ್ಯ ಗ್ರಾಹಕರ ಬಳಕೆಗೆ ಹೋಗುತ್ತದೆ ಎಂದು ಉಲ್ಲೇಖಿಸಿದ ಅವರು, ವಾಣಿಜ್ಯ ಬಳಕೆಯ ಸಕ್ಕರೆಗೆ ಹೆಚ್ಚಿನ ಬೆಲೆ ನಿಗದಿಪಡಿಸಿ, ಅದರಿಂದ ದೊರೆಯುವ ಲಾಭದ ಪಾಲನ್ನು ರೈತರ ಎಫ್ಆರ್ಪಿ ದರ ಹೆಚ್ಚಳಕ್ಕೆ ಬಳಸಬೇಕು ಎಂದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ರಸದಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಲಾಸಿಸ್ ಉತ್ಪಾದಿಸಿ, ಅದನ್ನು ಎಥನಾಲ್ ತಯಾರಿಕೆಗೆ ಬಳಸುವುದರಿಂದ ಹೆಚ್ಚುವರಿ ಲಾಭ ಗಳಿಸುತ್ತಿವೆ. ಈ ಉಪ ಉತ್ಪನ್ನಗಳಿಂದ ದೊರೆಯುವ ಆದಾಯದ ಲೆಕ್ಕಪತ್ರವನ್ನು ಪರಿಶೀಲಿಸುವ ವ್ಯವಸ್ಥೆ ಇರಬೇಕು. ಈ ಹಿಂದೆ ಪ್ರತಿ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆ ಮತ್ತು ಉಪ ಉತ್ಪನ್ನಗಳ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಆದರೆ ಈಗ ಆ ವ್ಯವಸ್ಥೆ ಇಲ್ಲದಿರುವುದರಿಂದ ಕಾರ್ಖಾನೆಗಳ ಕಾರ್ಯನಿರ್ವಹಣೆಯ ಮೇಲೆ ಸಮರ್ಪಕ ನಿಗಾ ಇಲ್ಲದಂತಾಗಿದೆ. ಈ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ತೂಕದಲ್ಲಿ ಆಗುವ ಮೋಸ ತಡೆಯಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ಸಕ್ಕರೆ ಕಾರ್ಖಾನೆಗಳ ಮುಂಭಾಗದಲ್ಲಿಯೇ ವಿದ್ಯುನ್ಮಾನ ತೂಕದ ಯಂತ್ರಗಳನ್ನು ಸ್ಥಾಪಿಸಬೇಕು. ರೈತರ ಕಬ್ಬಿನ ತೂಕವನ್ನು ಅಲ್ಲಿಯೇ ದಾಖಲಿಸಿ ನಂತರ ಕಾರ್ಖಾನೆಗೆ ಸಾಗಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಸಕ್ಕರೆ ನಿಯಂತ್ರಣ ಕಾಯ್ದೆ–1966ರ ಪ್ರಕಾರ ಕಬ್ಬಿನಿಂದ ದೊರೆಯುವ ಉಪ ಉತ್ಪನ್ನಗಳ ಲಾಭದಲ್ಲಿ ಶೇ.70ರಷ್ಟು ಪಾಲು ರೈತರಿಗೆ ದೊರೆಯುವಂತೆ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬರಗಾಲ ಅಥವಾ ಬೆಂಕಿಯಿಂದ ಕಬ್ಬು ಸುಟ್ಟುಹೋದ ಸಂದರ್ಭಗಳಲ್ಲಿ ರೈತರಿಗೆ ನೀಡುವ ಎಫ್ಆರ್ಪಿ ಹಣದಲ್ಲಿ ಶೇ.25ರಷ್ಟು ಕಡಿತ ಮಾಡುವ ಕ್ರಮವನ್ನು ನಿಲ್ಲಿಸಬೇಕು ಎಂದರು.
ಕಬ್ಬು ಕಟಾವು ಯಂತ್ರಗಳ ಬಳಕೆಯ ಸಂದರ್ಭದಲ್ಲಿ ವೇಸ್ಟೇಜ್ ಹೆಸರಿನಲ್ಲಿ ಶೇ.8ರಿಂದ 10ರಷ್ಟು ಹಣ ಕಡಿತ ಮಾಡುವುದನ್ನು ತಡೆಯಬೇಕು. ಕಬ್ಬು ಬೆಳೆಗಾರರಿಗೆ ಬ್ಯಾಂಕುಗಳು ನೀಡುವ ಸಾಲದ ಮರುಪಾವತಿ ಅವಧಿಯನ್ನು 12 ತಿಂಗಳಿನಿಂದ 18 ತಿಂಗಳಿಗೆ ಹೆಚ್ಚಿಸುವ ಬದಲು, ರೈತರಿಗೆ ಹೊರೆಯಾಗದ ರೀತಿಯಲ್ಲಿ ಸಾಲ ಮರುಪಾವತಿ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಮಾತನಾಡಿ, ಕೇಂದ್ರ ಸರ್ಕಾರ ರಚಿಸಿದ್ದ ಡಾ. ರಮೇಶ್ಚಂದ್ರ ಸಮಿತಿಯ ವರದಿಯ ಆಧಾರದಲ್ಲಿ ರೈತರ ಹಿತ ಕಾಪಾಡುವ ನೀತಿಗಳನ್ನು ಜಾರಿಗೊಳಿಸಬೇಕು. ರೈತರು ನಿರಂತರ ಹೋರಾಟದ ಮೂಲಕ ನ್ಯಾಯಯುತ ಬೆಲೆ ಮತ್ತು ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ತಮಿಳುನಾಡಿನ ರೈತ ಮುಖಂಡ ರಾಮನ್ ಗೌಂಡರ್ ಮಾತನಾಡಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷ ಬೆಳಗಾವಿಯ ಸುರೇಶ್ ಮಾಲಿಪಾಟೀಲ, ರಾಜ್ಯ ಸಂಚಾಲಕ ಬರಡನಪುರ ನಾಗರಾಜ್, ಹತ್ತಳ್ಳಿ ದೇವರಾಜ್, ಕರಬಸಪ್ಪ ಗೌಡ, ಮಂಡ್ಯದ ಶಂಭುಗೌಡ, ನರಸಾರೆಡ್ಡಿ ಪಾಟೀಲ ಸೇರಿದಂತೆ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಬೆಲೆ, ಉತ್ಪಾದನಾ ವೆಚ್ಚ, ಸಕಾಲಿಕ ಹಣ ಪಾವತಿ, ತೂಕದ ವ್ಯತ್ಯಾಸ, ಉಪ ಉತ್ಪನ್ನಗಳ ಲಾಭ ಹಂಚಿಕೆ ಹಾಗೂ ಕಾರ್ಖಾನೆಗಳ ಮೇಲ್ವಿಚಾರಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.



