ವಿದ್ಯಾರ್ಥಿಗಳು ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳಲಿ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ, ಸೆ.11: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುವುದರ ಜತೆಗೆ ನವೀನ ಹಾಗೂ ಉದ್ಯೋಗಮುಖಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ IEEE ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಉದ್ಘಾಟನೆ ಹಾಗೂ IEEE ಕಂಪ್ಯೂಟರ್ ಸೊಸೈಟಿಯ 80ನೇ ವಾರ್ಷಿಕೋತ್ಸವದ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಿನ್ನೆಯ ತಂತ್ರಜ್ಞಾನವು ನಾಳೆಗೆ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಚಿಂತನೆಯಿಂದ ಹೊರಬಂದು ಹೊಸ ಆಲೋಚನೆಗಳು ಹಾಗೂ ತಂತ್ರಜ್ಞಾನಗಳತ್ತ ಗಮನಹರಿಸಬೇಕು’ ಎಂದು ಅವರು ಸಲಹೆ ನೀಡಿದರು.
ಹೊಸ ಆಲೋಚನೆಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ನವೋದ್ಯಮಗಳಾಗಿ ರೂಪಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಇದರೊಂದಿಗೆ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
IEEE ಕಂಪ್ಯೂಟರ್ ಸೊಸೈಟಿಯು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತಾಂತ್ರಿಕ ಜ್ಞಾನ, ವೃತ್ತಿಪರರೊಂದಿಗೆ ಸಂಪರ್ಕ, ಜ್ಞಾನ ವಿನಿಮಯ ಹಾಗೂ ಉದ್ಯಮಶೀಲತೆಗೆ ಅಗತ್ಯವಾದ ಅವಕಾಶಗಳನ್ನು ಒದಗಿಸುವ ಪ್ರಮುಖ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಾಂತ್ರಿಕ ಚರ್ಚೆಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಹಾಗೂ ವಿವಿಧ ವೃತ್ತಿಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಸುನಿಲ್ ಸಿ.ಕೆ., IEEE ವಿದ್ಯಾರ್ಥಿ ಘಟಕವು ವಿದ್ಯಾರ್ಥಿಗಳು ಹಾಗೂ ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರ ನಡುವೆ ಸಂಪರ್ಕ ಕಲ್ಪಿಸುವ ಜಾಗತಿಕ ವೇದಿಕೆಯಾಗಿದೆ. ವಿವಿಧ ಕ್ಷೇತ್ರಗಳ ನಡುವಿನ ಸಹಯೋಗ, ಜ್ಞಾನ ವಿನಿಮಯ ಹಾಗೂ ನಾವೀನ್ಯತೆಗೆ ಇದು ಉತ್ತೇಜನ ನೀಡುತ್ತಿದೆ ಎಂದರು.
ಕಂಪ್ಯೂಟರ್ ವಿಜ್ಞಾನ ವಿಭಾಗದ ಡೀನ್ ಪ್ರೊ. ಆರ್.ಎಸ್. ಹೆಗಡೆ ಅವರು IEEE ಕಂಪ್ಯೂಟರ್ ಸೊಸೈಟಿಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ, ನಾವೀನ್ಯತೆ ಹಾಗೂ ವೃತ್ತಿಪರ ಕೌಶಲಗಳನ್ನು ಬೆಳೆಸುವಲ್ಲಿ ವಿದ್ಯಾರ್ಥಿ ಘಟಕ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯುಎಕ್ಸ್ ವಿನ್ಯಾಸದ ಹಿರಿಯ ಸಹವರ್ತಿ ಕುಮಾರಿ ಅಂಜಲಿ ರೆಡ್ಡಿ, ಯುಎಕ್ಸ್ ವಿಷಯ ವಿನ್ಯಾಸದ ಹಿರಿಯ ಸಹವರ್ತಿ ಕುಮಾರಿ ದೇವ ದರ್ಶಿನಿ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ವಿ. ಧಾರವಾಡಕರ್, IEEE ಕಂಪ್ಯೂಟರ್ ಸೊಸೈಟಿ ಸಲಹೆಗಾರ ಹಾಗೂ ಪ್ರಾಧ್ಯಾಪಕ ಡಾ. ರಾಕೇಶ್ ಕುಮಾರ್ ಗೋದಿ, ಪ್ರಾಧ್ಯಾಪಕರಾದ ಪ್ರೊ. ವೆಂಕಟ ರಮಣ ದೊಡ್ಡಿ, ಡಾ. ಪಿ.ಎಂ. ಕಾಂಬಳೆ, ಪ್ರೊ. ಪ್ರಮೋದ್ ಕುಮಾರ್, ಡಾ. ಪರಮೇಶ್ ಎಸ್.ಪಿ., ಡಾ. ಎನ್. ಸಂದೀಪ್, ಡಾ. ನೃಸಿಂಹ ಚರಣ್ ಪ್ರಧಾನ, ಡಾ. ರೋಹಿತ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



