ವಚನಗಳು ಬದುಕಿನ ಜೀವಾಳ: ಡಾ. ಸಿದ್ದು ಪಾಟೀಲ
ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದನ್ನು ವಚನಗಳು ಕಲಿಸುತ್ತವೆ

ಕಲಬುರಗಿ, ಆ.29: ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದನ್ನು ವಚನಗಳು ನಮಗೆ ಕಲಿಸುತ್ತವೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ನಡೆಯಲಿರುವ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ, ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಸಾರಥ್ಯದ ಶರಣ ಸಂಸ್ಕೃತಿ ದೃಶ್ಯಕಲಾ ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶನಿವಾರ ಬಸವಾದಿ ಶರಣರ ವಚನಗಳನ್ನು ಆಧರಿಸಿದ ಚಿತ್ರಕಲಾ ಪ್ರದರ್ಶನಕ್ಕೆ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
‘ಇವನಾರವ, ಇವನಾರವ’ ಎನ್ನದೆ ‘ಇವ ನಮ್ಮವ, ಇವ ನಮ್ಮವ’ ಎಂದು ಸಾರುವ ವಚನಗಳು ಇಂದಿನ ಸಮಾಜದಲ್ಲಿ ಪ್ರೀತಿ ಹಾಗೂ ಸಾಮರಸ್ಯವನ್ನು ಬೆಳೆಸುತ್ತವೆ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯಲ್ಲಿ ಹರಿಯುವ ನದಿಯಂತೆ ನಿರಂತರವಾಗಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರ ವಚನಗಳು ನಮ್ಮ ಕನ್ನಡದ ನಿಜವಾದ ಅಸ್ಮಿತೆಯಾಗಿವೆ. ಅವು ನಮ್ಮ ಬದುಕನ್ನು ಮತ್ತಷ್ಟು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ನೆರವಾಗುವ ಮಾರ್ಗಸೂಚಿಗಳಾಗಿವೆ. ಆಧುನಿಕ ಸಂದರ್ಭದಲ್ಲಿ ಅನೇಕ ಲೇಖಕರು ವಚನಗಳ ಮಾದರಿಯನ್ನು ಅನುಸರಿಸಿಕೊಂಡು ಅಮೂಲ್ಯ ಸಾಹಿತ್ಯ ರಚಿಸಿದ್ದಾರೆ. ವಚನಗಳು ಆದರ್ಶ ಬದುಕಿಗೆ ಪೂರಕವಾಗಿವೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ, ಶರಣರ ವಚನಗಳು ನಮ್ಮ ಬದುಕಿನ ಸತ್ಯಗಳನ್ನು ಎತ್ತಿಹಿಡಿಯುತ್ತವೆ. ವಚನಗಳು ಕೇವಲ ಕಾವ್ಯವಲ್ಲ; ಮನುಷ್ಯ ಹೇಗೆ ತನ್ನ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತವೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ. ಗಣಪತಿ ಸಿಂಧೆ, ರೈತ ಹೋರಾಟಗಾರ ದಯಾನಂದ ಪಾಟೀಲ ಕಮಲಾನಗರ, ವಚನಪ್ರಿಯ ಜಗದೀಶ ಮರಪಳ್ಳಿ, ಮಹಿಳಾಪರ ಸಂಘಟಕಿ ಸರೋಜಿನಿ ಎಸ್. ಮಯೂರ್, ಕಲಾ ಸೌಧ ಸಂಚಾಲಕ ಡಾ. ರೆಹಮಾನ್ ಪಟೇಲ್, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ, ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಅಂಡಗಿ ಹಾಗೂ ಜಯಶ್ರೀ ಜಮಾದಾರ ಸೇರಿದಂತೆ ಹಲವರು ಮಾತನಾಡಿದರು.
ಶಿವಲೀಲಾ ಕಲಗುರ್ಕಿ, ರಾಜೇಂದ್ರ ಮಾಡಬೂಳ, ಸೋಮಶೇಖರಯ್ಯ ಹೊಸಮಠ, ರೇವಣಸಿದ್ಧ ಹೊಟ್ಟಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



