ಸಮಾಜ

ಕಾಯಕದ ಮೌಲ್ಯ ಹೆಚ್ಚಿಸಿದ ಶರಣ ನುಲಿಯ ಚಂದಯ್ಯ: ಸತ್ಯಂಪೇಟೆ

ಸರ್ವರಿಗೆ ಸಮಬಾಳು, ಸಮಪಾಲು ಎಂಬ ಆಶಯದೊಂದಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ಆಶಯದೊಂದಿಗೆ ಎಲ್ಲರೂ ಸೇರಿ ಸಮಾನತೆಯ ಸಮಾಜ ಕಟ್ಟಿದ ಶರಣರು ‘ಕಾಯಕವೇ ಕೈಲಾಸ’ ಎಂಬ ಸಂದೇಶವನ್ನು ಸಾರಿದರು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣ ನುಲಿಯ ಚಂದಯ್ಯ ಅವರು ಶ್ರೇಷ್ಠ ಶರಣರಾಗಿದ್ದರು. ಅಂದಿನ ಅನುಭವ ಮಂಟಪವೆಂಬ ಪ್ರಜಾಪ್ರಭುತ್ವದ ವೇದಿಕೆಯಲ್ಲಿ ನುಲಿಯ ಚಂದಯ್ಯ ಅವರು ಸಮಾಜವನ್ನು ಪ್ರತಿನಿಧಿಸಿದ್ದರು. ಕಾಯಕದ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ ಅವರ ಜೀವನಾದರ್ಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಶರಣರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಅವರು ಇಡೀ ಮಾನವಕುಲಕ್ಕೆ ಸೇರಿದ ಆದರ್ಶ ಪುರುಷರು. ಹಿಂದೂ ಧರ್ಮದಲ್ಲಿದ್ದ ಜಡತ್ವವನ್ನು ಹೋಗಲಾಡಿಸಲು ಸಾಮಾಜಿಕ ಚಳವಳಿ ಆರಂಭಿಸಿದ ಶರಣರು, ತಮ್ಮ ಪ್ರಜಾಸತ್ತಾತ್ಮಕ ವಿಚಾರಧಾರೆಗಳ ಮೂಲಕ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದರು.

ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅವರು ವಿಶೇಷ ಉಪನ್ಯಾಸ ನೀಡಿದರು.

ಕೊರಮ ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಭಜಂತ್ರಿ ಕರ್ಜಗಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶ್ರೀಮಂತ ಎಲ್. ಜಾಧವ, ಸಿಪಿಐ ರಾಘವೇಂದ್ರ ಭಜಂತ್ರಿ, ಶಾಂತಪ್ಪ ಜಾಧವ, ಮಹಾದೇವಿ ಭಜಂತ್ರಿ ಹಾಗೂ ಜಗನ್ನಾಥ ಭಜಂತ್ರಿ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಯುವ ಮುಖಂಡ ಸುನಿಲ ಮಾನಪಡೆ ಪ್ರಾಸ್ತಾವಿಕವಾಗಿ ಮಾತನಾಡಿ ಮನವಿ ಸಲ್ಲಿಸಿದರು. ಶಿವಾನಂದ ಅಣಜಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಯಂತಿ ಸಮಿತಿ ಕಾರ್ಯದರ್ಶಿ ರಾಜಕುಮಾರ ಮದಗುಣಕಿ, ಹಿರಿಯರಾದ ಲಕ್ಷ್ಮಣ ಭಜಂತ್ರಿ, ಯುವ ಮುಖಂಡರಾದ ಸಿದ್ದಲಿಂಗ ಪಾಳ, ರಂಗ ಕಲಾವಿದ ಕಲ್ಯಾಣಿ ಭಜಂತ್ರಿ, ರಮೇಶ ಶಹಾಬಾಜಾರ, ಶಿವಕುಮಾರ ಅಮೃತಪ್ಪ, ಹನಮಂತ ರಾಮನಗರ, ವಿಜಯ ಸಂತ್ರಸವಾಡಿ, ಶಂಕರ ಜಾಧವ, ರಾಜಶೇಖರ ಭಜಂತ್ರಿ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಯಕಕ್ಕೆ ಶರಣ ನುಲಿಯ ಚಂದಯ್ಯನವರ ಮಹತ್ವದ ಕೊಡುಗೆ

ಗುರು, ಲಿಂಗ ಹಾಗೂ ಜಂಗಮ ಸೇವೆಯಲ್ಲಿಯೂ ಕಾಯಕ ಮತ್ತು ಚರಸೇವೆಗೆ ಮಹತ್ವ ನೀಡಿದ ನುಲಿಯ ಚಂದಯ್ಯನವರು ಸತ್ಯ ಹಾಗೂ ಶುದ್ಧ ಕಾಯಕ ಮಾಡಬೇಕು ಎಂಬ ಸಂದೇಶ ಸಾರಿದರು. ಕಾಯಕದ ಮೌಲ್ಯವನ್ನು ಹೆಚ್ಚಿಸಿದ ಅವರು, ಅಜ್ಞಾನವನ್ನು ಕಳೆದು ಸುಜ್ಞಾನದತ್ತ ಸಾಗುವ ಬಸವ ಮಾರ್ಗವನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಆ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button