ಆರೋಗ್ಯ

ಇನ್ಫ್ಲುಯೆಂಜಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಡಾ. ಶರಣಬಸಪ್ಪ ಕ್ಯಾತನಾಳ್

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಸಜ್ಜು; ILI-SARI ಪ್ರಕರಣಗಳ ಮೇಲೆ ನಿಗಾ

ಕಲಬುರಗಿ, ಆ.28: ಜುಲೈನಿಂದ ಸೆಪ್ಟೆಂಬರ್‌ವರೆಗೆ ಸಾಮಾನ್ಯವಾಗಿ “ಫ್ಲೂ” ಎಂದು ಕರೆಯಲಾಗುವ ಋತುಮಾನದ ಜ್ವರ (ಇನ್ಫ್ಲುಯೆಂಜಾ) ಹಾಗೂ ಇನ್ಫ್ಲುಯೆಂಜಾ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಉಸಿರಾಟದ ಕಾಯಿಲೆ ಹೆಚ್ಚಾಗಿ ಕಂಡುಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಇನ್ಫ್ಲುಯೆಂಜಾವನ್ನು ತ್ವರಿತವಾಗಿ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ನಿಯಂತ್ರಿಸಲು ಆರೋಗ್ಯ ಸಚಿವರು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆ ನೀಡಿದ್ದಾರೆ. ಅದರಂತೆ ಕಲಬುರಗಿ ಜಿಲ್ಲೆಯಲ್ಲಿಯೂ ಯಾವುದೇ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ನಿಭಾಯಿಸಲು ಆರೋಗ್ಯ ಇಲಾಖೆ ಅಗತ್ಯ ಮೂಲಸೌಕರ್ಯ ಹಾಗೂ ಔಷಧಿಗಳೊಂದಿಗೆ ಸಜ್ಜಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಪಿ.ಪಿ.ಇ. ಕಿಟ್, ಎನ್-95 ಮಾಸ್ಕ್ ಹಾಗೂ ಒಸೆಲ್ಟಮಿವಿರ್ ಔಷಧಿಗಳು ಸಮರ್ಪಕ ಪ್ರಮಾಣದಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ಫ್ಲುಯೆಂಜಾ ತರಹದ ಕಾಯಿಲೆ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಅಗತ್ಯ ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಇನ್ಫ್ಲುಯೆಂಜಾ ಹಾಗೂ ತೀವ್ರ ಉಸಿರಾಟದ ಸೋಂಕಿನ ಪ್ರಕರಣಗಳ ಪತ್ತೆಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ವಿ.ಆರ್.ಡಿ.ಎಲ್. ಪ್ರಯೋಗಾಲಯದಲ್ಲಿ ಮಾದರಿ ಸಂಗ್ರಹಣೆ, ಪ್ರಯೋಗಾಲಯ ಸಾಮಗ್ರಿಗಳ ಲಭ್ಯತೆ ಹಾಗೂ ಸಕಾಲಿಕ ಪರೀಕ್ಷೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್ (ಐಎಚ್‌ಐಪಿ) ಕಣ್ಗಾವಲು ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 2026ರ ಆಗಸ್ಟ್ 22ರವರೆಗೆ ಒಟ್ಟು 4,212 ಪ್ರಯೋಗಾಲಯ ದೃಢೀಕೃತ ಇನ್ಫ್ಲುಯೆಂಜಾ ಪ್ರಕರಣಗಳು ವರದಿಯಾಗಿವೆ. 2025ರಲ್ಲಿ 4,583 ಹಾಗೂ 2024ರಲ್ಲಿ 3,903 ಪ್ರಕರಣಗಳು ದಾಖಲಾಗಿದ್ದವು. ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಇಲ್ಲಿಯವರೆಗೆ ಒಟ್ಟು 1,784 ಇನ್ಫ್ಲುಯೆಂಜಾ ತರಹದ ಕಾಯಿಲೆ (ಐಎಲ್‌ಐ) ಪ್ರಕರಣಗಳು ವರದಿಯಾಗಿವೆ ಎಂದು ಡಾ. ಶರಣಬಸಪ್ಪ ಕ್ಯಾತನಾಳ್ ಮಾಹಿತಿ ನೀಡಿದ್ದಾರೆ.

ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ಭೇಟಿ ನೀಡಿ

ಇನ್ಫ್ಲುಯೆಂಜಾ ಸಂಬಂಧಿತ ರೋಗಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸ್ವಯಂ ಔಷಧೋಪಚಾರ ಮಾಡಿಕೊಳ್ಳದೆ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಡಿ.ಎಚ್.ಓ. ಡಾ. ಶರಣಬಸಪ್ಪ ಕ್ಯಾತನಾಳ್ ಮನವಿ ಮಾಡಿದ್ದಾರೆ.

ಸೋಂಕು ತಡೆಗೆ ಜಾಗೃತಿ

ಆರೋಗ್ಯ ಇಲಾಖೆಯು ಎಲ್ಲ ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸಿದೆ. ಉಸಿರಾಟದ ನೈರ್ಮಲ್ಯ, ಕೆಮ್ಮುವಾಗ ಹಾಗೂ ಸೀನುವಾಗ ಅನುಸರಿಸಬೇಕಾದ ಶಿಷ್ಟಾಚಾರ ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳ ಜತೆಗೆ ದೃಶ್ಯ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕವೂ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗಿದೆ.

ಏನು ಮಾಡಬೇಕು?

  • ಸೀನುವಾಗ ಮತ್ತು ಕೆಮ್ಮುವಾಗ ಮೂಗು ಹಾಗೂ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
  • ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು.
  • ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಬೇಕು.
  • ರೋಗಲಕ್ಷಣಗಳಿರುವವರು ಇತರರಿಂದ ಅಂತರ ಕಾಯ್ದುಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು.

ಏನು ಮಾಡಬಾರದು?

  • ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇಪದೇ ಕೈಗಳಿಂದ ಮುಟ್ಟಿಕೊಳ್ಳಬಾರದು.
  • ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧೋಪಚಾರ ಮಾಡಬಾರದು.
  • ರೋಗಲಕ್ಷಣಗಳಿರುವ ಸಂದರ್ಭದಲ್ಲಿ ಕೈಕುಲುಕುವುದನ್ನು ತಪ್ಪಿಸಬೇಕು.
  • ರೋಗಲಕ್ಷಣಗಳಿದ್ದಾಗ ಜನಸಂದಣಿ ಇರುವ ಸ್ಥಳಗಳಿಗೆ ತೆರಳಬಾರದು.
  • ಬಳಸಿದ ಕರವಸ್ತ್ರ ಹಾಗೂ ನ್ಯಾಪ್ಕಿನ್‌ಗಳನ್ನು ಮರುಬಳಕೆ ಮಾಡಬಾರದು.

Related Articles

Leave a Reply

Your email address will not be published. Required fields are marked *

Back to top button