ಶಿಕ್ಷಣ

ಕಲ್ಯಾಣ ಕರ್ನಾಟಕದ ಶಿಕ್ಷಣ ಹರಿಕಾರ ಡಾ. ಶರಣಬಸವಪ್ಪ ಅಪ್ಪ: ಪ್ರೊ. ನಾಯಕ್

ಶಿಕ್ಷಣ ದಾಸೋಹಕ್ಕೆ ಮಹತ್ವ ನೀಡಿದ ಡಾ. ಅಪ್ಪ ಅವರು ಶೈಕ್ಷಣಿಕ ಕ್ಷೇತ್ರದ ಶಕ್ತಿಯಾಗಿ ಬೆಳೆದವರು

ಕಲಬುರಗಿ, ಆ.27- ಡಾ. ಶರಣಬಸವಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿದ ಮಹಾನ್ ಶಿಕ್ಷಣ ಹರಿಕಾರ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಎಸ್. ನಾಯಕ್ ಹೇಳಿದರು.

ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ‘ಶಿಕ್ಷಣ ಸಂಸ್ಥೆಗಳು’ ವಿಷಯ ಕುರಿತು ಮಾತನಾಡಿದರು.

ಶರಣಬಸವೇಶ್ವರ ಸಂಸ್ಥಾನದ ದಾಸೋಹ ಪರಂಪರೆಯಲ್ಲಿ ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹಕ್ಕೂ ಮಹತ್ವ ನೀಡಲಾಗಿದೆ. 1934ರಲ್ಲಿ ಮಹಾದೇವಿ ಕನ್ಯಾ ಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಆರಂಭಿಸುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವದ ಹೆಜ್ಜೆ ಇಡಲಾಯಿತು. ಮಹಿಳೆಯರಿಗೆ ಶಿಕ್ಷಣದ ಅವಕಾಶಗಳು ಸೀಮಿತವಾಗಿದ್ದ ಕಾಲದಲ್ಲಿ ಇದು ಅತ್ಯಂತ ಪ್ರಗತಿಪರ ಪ್ರಯತ್ನವಾಗಿತ್ತು ಎಂದು ಅವರು ಹೇಳಿದರು.

ಲಿಂ. ದೊಡ್ಡಪ್ಪ ಅಪ್ಪ ಅವರು ಆರಂಭಿಸಿದ ಶಿಕ್ಷಣ ಸಂಸ್ಥೆಗಳಿಗೆ ಸಂಜೀವಿನಿಯಾಗಿ ನಿಂತವರು ಡಾ. ಶರಣಬಸವಪ್ಪ ಅಪ್ಪ. ಅಪಾರ ಜ್ಞಾನವನ್ನು ಹೊಂದಿದ್ದ ಡಾ. ಅಪ್ಪ ಅವರು ಶರಣಬಸವೇಶ್ವರರ ಆಶೀರ್ವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಮೇರು ವ್ಯಕ್ತಿಯಾಗಿದ್ದರು ಎಂದು ಪ್ರೊ. ನಾಯಕ್ ಬಣ್ಣಿಸಿದರು.

ಕಲಬುರಗಿಯ ನೆಲದಲ್ಲಿ ಶಿಕ್ಷಣದ ವಿವಿಧ ಕೋರ್ಸ್‌ಗಳ ಬೀಜಗಳನ್ನು ಬಿತ್ತಿ, ಅವುಗಳನ್ನು ಬೆಳೆಸಿದ ಡಾ. ಅಪ್ಪ ಅವರು ಇಂದು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೆಲವೇ ಪ್ರಮುಖ ವ್ಯಕ್ತಿಗಳ ಸಾಲಿನಲ್ಲಿ ಶಕ್ತಿಯಾಗಿ ಕಂಗೊಳಿಸುತ್ತಿದ್ದಾರೆ. 42ಕ್ಕೂ ಹೆಚ್ಚು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಕಲ್ಯಾಣ ಕರ್ನಾಟಕದ ಮೊದಲ ಖಾಸಗಿ ಶರಣಬಸವ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾತ್ರವಲ್ಲದೆ ಉತ್ತರ ಕರ್ನಾಟಕದ ಪ್ರದೇಶದಲ್ಲಿಯೂ ಯಾರೂ ನೀಡದ ರೀತಿಯಲ್ಲಿ ಶಿಕ್ಷಣ ಒದಗಿಸಿ, ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸಿರುವ ಡಾ. ಶರಣಬಸವಪ್ಪ ಅಪ್ಪ ಅವರು ಇಂದು ನಾಡಿನ ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ಬೋಧಕರು ಹಾಗೂ ಸಿಬ್ಬಂದಿಯ ಪಾಲಿಗೆ ಕಾಮಧೇನು ಮತ್ತು ಕಲ್ಪವೃಕ್ಷದಂತಾಗಿದ್ದಾರೆ ಎಂದರು.

ಡಾ. ಅಪ್ಪ ಅವರ ಶಿಕ್ಷಣದರ್ಶನದ ಮೂಲ ಆಶಯವೆಂದರೆ ಜ್ಞಾನವು ಕೇವಲ ವ್ಯಕ್ತಿಯ ಉನ್ನತಿಗೆ ಮಾತ್ರ ಸೀಮಿತವಾಗದೆ, ಸಮಾಜದ ಒಳಿತಿಗೂ ಬಳಕೆಯಾಗಬೇಕು ಎಂಬುದಾಗಿತ್ತು ಎಂದು ಪ್ರೊ. ಕೆ.ಎಸ್. ನಾಯಕ್ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button