ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಚಿಂಚೋಳಿ ತಾಲೂಕಿನ ಇಬ್ಬರು ಸುರಕ್ಷಿತ
ರಕ್ಷಣಾ ಕಾರ್ಯಾಚರಣೆಯಿಂದ ಸಂಕಷ್ಟದಲ್ಲಿದ್ದ ಮಲ್ಲಿನಾಥ್ ಕೊಲಕುಂದಿ, ಸಂಗಮೇಶ್ ಕನಕಪುರ ರಕ್ಷಣೆ

ಕಲಬುರಗಿ, ಆ.27- ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ನಡುವೆ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಇಬ್ಬರು ಕನ್ನಡಿಗರನ್ನು ರಕ್ಷಣಾ ಪಡೆ ಸುರಕ್ಷಿತವಾಗಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರು ನೇಪಾಳದಲ್ಲಿ ಸಿಲುಕಿಕೊಂಡಿದ್ದರು. ಪ್ರವಾಹದ ಪರಿಸ್ಥಿತಿ ಕುರಿತು ಮಾಹಿತಿ ಲಭ್ಯವಾದ ಬಳಿಕ ಕರ್ನಾಟಕದ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಇಬ್ಬರನ್ನೂ ಸಂಪರ್ಕಿಸಿ ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆಗೆ ಮುಂದಾಗಿದ್ದರು. ಇದೀಗ ಇಬ್ಬರೂ ಸುರಕ್ಷಿತ ಸ್ಥಳ ತಲುಪಿದ್ದು, ಕುಟುಂಬಸ್ಥರು ಹಾಗೂ ಅಧಿಕಾರಿಗಳಿಗೆ ನೆಮ್ಮದಿ ದೊರೆತಿದೆ.
ಮಲ್ಲಿನಾಥ್ ಹಾಗೂ ಸಂಗಮೇಶ್ ಸೇರಿದಂತೆ ಕಲಬುರಗಿ ಜಿಲ್ಲೆಯ ಇಬ್ಬರು ಮತ್ತು ಹೈದರಾಬಾದ್‌ನ 23 ಮಂದಿ ಸೇರಿ ಒಟ್ಟು 25 ಜನರು ನೇಪಾಳಕ್ಕೆ ತೆರಳಿದ್ದರು ಎನ್ನಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಅವರು ಸಿಲುಕಿರುವ ಮಾಹಿತಿ ದೊರೆತ ಕೂಡಲೇ ಕರ್ನಾಟಕದ ವಿಪತ್ತು ನಿರ್ವಹಣಾ ಸಂಸ್ಥೆಯನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿತ್ತು.
ಇಬ್ಬರೂ ಸುರಕ್ಷಿತ ಸ್ಥಳಕ್ಕೆ ತಲುಪಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದು, ಅವರನ್ನು ನೇಪಾಳದಿಂದ ದೆಹಲಿಗೆ ಕರೆತಂದು ಕರ್ನಾಟಕ ಭವನದಲ್ಲಿ ಅಗತ್ಯ ವಸತಿ ಹಾಗೂ ಇತರ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಗಂಡಕ್ ನದಿ ನೀರಿನ ಮಟ್ಟ ದಿಢೀರ್ ಏರಿಕೆ
ನೇಪಾಳದಲ್ಲಿ ಉಂಟಾಗಿರುವ ಜಲಪ್ರಳಯದ ಪರಿಣಾಮ ಭಾರತದಲ್ಲಿನ ಗಂಡಕ್ ನದಿಯ ನೀರಿನ ಮಟ್ಟವೂ ದಿಢೀರ್ ಏರಿಕೆಯಾಗಿದೆ. ಇದರಿಂದ ಬಿಹಾರ ಹಾಗೂ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಗಂಡಕ್ ನದಿ ಪಾತ್ರದಲ್ಲಿ ಈಗಾಗಲೇ 20 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತ್ರಿಶೂಲಿ ನದಿಯ ಮೂಲಕ ಭಾರತ ಪ್ರವೇಶಿಸುವ ಗಂಡಕ್ ನದಿಯಿಂದ ಪಶ್ಚಿಮ ಚಂಪಾರಣ್, ಮುಜಫರ್‌ಪುರ, ಕುಶೀನಗರ ಹಾಗೂ ಮಹಾರಾಜ್‌ಗಂಜ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ ತೀರದ ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.
ನೇಪಾಳದಲ್ಲಿ ಮತ್ತೊಂದು ಹಂತದ ಪ್ರವಾಹದ ಮುನ್ಸೂಚನೆ ದೊರೆತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಿಮ ಹಾಗೂ ಬಂಡೆಗಳು ಕುಸಿದು ನದಿಯ ಮೇಲ್ಭಾಗದಲ್ಲಿ ಕೃತಕ ಜಲಾಶಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದು ಯಾವುದೇ ಕ್ಷಣದಲ್ಲಿ ಒಡೆದುಹೋಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹೀಗಾದಲ್ಲಿ ಮತ್ತಷ್ಟು ಭೀಕರ ಪ್ರವಾಹ ಉಂಟಾಗುವ ಸಾಧ್ಯತೆಯಿದೆ.
ಅಂತಾರಾಷ್ಟ್ರೀಯ ಸಮಗ್ರ ಬೆಟ್ಟಗುಡ್ಡಗಳ ಅಭಿವೃದ್ಧಿ ಕೇಂದ್ರವೂ ಈ ಕುರಿತು ನೇಪಾಳಕ್ಕೆ ಎಚ್ಚರಿಕೆ ನೀಡಿದೆ. ಲಹೆಂದಾ ಕೋಲಾ ನದಿಯ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಕೃತಕ ಅಣೆಕಟ್ಟಿನ ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ. ಬೋತೆ ಕೋಶಿ ಹಾಗೂ ತ್ರಿಶೂಲಿ ನದಿ ಪಾತ್ರಗಳಲ್ಲಿ ಹೈ ಅಲರ್ಟ್ ಮುಂದುವರಿಸಲಾಗಿದೆ.
ಈ ನಡುವೆ ದೆಹಲಿಯ ಕರ್ನಾಟಕ ಭವನದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇಪಾಳದಲ್ಲಿ ಸುರಕ್ಷಿತವಾಗಿರುವ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಅವರೊಂದಿಗೆ ದೂರವಾಣಿ ಮೂಲಕ ನೇರವಾಗಿ ಮಾತನಾಡಿ ಧೈರ್ಯ ತುಂಬಿದ್ದಾರೆ. ಯಾರೂ ಭಯಪಡುವ ಅಗತ್ಯವಿಲ್ಲ, ನಿಮ್ಮನ್ನು ಸುರಕ್ಷಿತವಾಗಿ ಕರೆತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.



