
ಶಹಾಪುರ: ಧರ್ಮ, ಸಮಾಜ ಹಾಗೂ ರಾಷ್ಟ್ರ ಉಳಿಯಬೇಕಾದರೆ ಆಯಾ ದೇಶದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಬೇಕು. ಕಲೆ, ಸಾಹಿತ್ಯ, ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವದ ದಟ್ಟ ಛಾಯೆ ಹನ್ನೆರಡನೇ ಶತಮಾನದ ಶರಣರ ಬದುಕು ಮತ್ತು ಬೋಧನೆಗಳಲ್ಲಿ ಕಾಣಸಿಗುತ್ತದೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದಾರ ಹೇಳಿದರು.
ನಗರದ ಬಸವಮಾರ್ಗ ಪ್ರತಿಷ್ಠಾನವು ಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪ ಅವರ ನೆನಹಿನಲ್ಲಿ ಆಯೋಜಿಸಿದ್ದ ‘ತಿಂಗಳ ಬಸವ ಬೆಳಕು–135’ ಕಾರ್ಯಕ್ರಮದಲ್ಲಿ ‘ಶರಣ ತತ್ವಗಳ ಅವಶ್ಯಕತೆ’ ವಿಷಯ ಕುರಿತು ಅವರು ಮಾತನಾಡಿದರು.
ಯುವಜನತೆ ಇಂದು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಉಡಾಳರ ಹಿಂದೆ ಸಾಗುತ್ತಿದ್ದಾರೆ. ವಿವಿಧ ತಂತ್ರಜ್ಞಾನಗಳ ಗೀಳಿಗೂ ಒಳಗಾಗುತ್ತಿದ್ದಾರೆ. ಹನ್ನೆರಡನೇ ಶತಮಾನದ ಶರಣರ ವಚನಗಳ ಸ್ಪರ್ಶ ಯುವಜನತೆಗೆ ದೊರೆತರೆ, ಅವರು ತಾತ್ವಿಕವಾದ ಬದುಕು ಹಾಗೂ ಉತ್ತಮ ಆರೋಗ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಚಂದ್ರಬಲ, ತಾರಾಬಲಕ್ಕಿಂತ ಮನೋಬಲವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಇದಕ್ಕೆ ಬೇಕಾದ ಮದ್ದು ವಚನ ಸಾಹಿತ್ಯದಲ್ಲಿದೆ. ವಚನ ಸಾಹಿತ್ಯ ಜ್ಞಾನದ ಆಗರವಾಗಿದ್ದು, ಅದರ ಸ್ಪರ್ಶವಾದರೆ ಪಾಶಾಣವೂ ಪರುಷವಾಗಿ ಪರಿವರ್ತನೆಯಾಗುತ್ತದೆ. ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಗಟ್ಟಲೆ ರೂಪಾಯಿ ಖರ್ಚು ಮಾಡುತ್ತೇವೆ. ಆದರೆ ಅವರಿಗೆ ಸಂಸ್ಕಾರ ನೀಡುವಲ್ಲಿ ಹಿಂದೆ ಬೀಳುತ್ತಿದ್ದೇವೆ ಎಂದು ವಿಷಾದಿಸಿದರು.
ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಗೂಡಿ ಸಾಗದಿದ್ದರೆ ಆಧ್ಯಾತ್ಮದ ಹೆಸರಿನಲ್ಲಿ ಮೌಢ್ಯ ಬೆಳೆದು, ಧರ್ಮ ಶೋಷಣೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅವರು, ಪ್ರತಿಯೊಂದು ಮನೆಯೂ ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಬೇಕಾದರೆ ವಚನ ಸಾಹಿತ್ಯದ ಓದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದ ಬರಡು ನೆಲದಲ್ಲಿ ಶಿಕ್ಷಣವೆಂಬ ಹಸಿರನ್ನು ಹೊರಹೊಮ್ಮಿಸಿದ್ದಾರೆ. ಅವರ ಪ್ರಯತ್ನದಿಂದಲೇ ಈ ಭಾಗದ ಜನರು ವೈದ್ಯರು, ಎಂಜಿನಿಯರ್‌ಗಳು, ಸಾಹಿತಿಗಳು, ರಾಜಕಾರಣಿಗಳು ಹಾಗೂ ಸಮಾಜ ಚಿಂತಕರಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯೆಯೊಂದೇ ಮನುಷ್ಯನನ್ನು ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತಗೊಳಿಸಬಲ್ಲದು ಎಂಬುದನ್ನು ಅರಿತಿದ್ದ ಪೂಜ್ಯರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸಣ್ಣದಾಗಿ ಆರಂಭವಾದ ಶಾಲಾ-ಕಾಲೇಜುಗಳನ್ನು ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಸಿರುವುದು ಅವರ ಪರಿಶ್ರಮದ ದ್ಯೋತಕವಾಗಿದೆ ಎಂದರು.
ಮತ್ತೋರ್ವ ಅತಿಥಿ ಡಾ. ಗಂಗಾಧರ ಚಟ್ರಿಕಿ ಮಾತನಾಡಿ, ಜನರ ಮನದ ಮೈಲಿಗೆಯನ್ನು ತೊಳೆಯಲು ಬಸವಮಾರ್ಗ ಪ್ರತಿಷ್ಠಾನ ಅಹರ್ನಿಶಿ ಶ್ರಮಿಸುತ್ತಿದೆ. ಜನರ ಮನದ ಗೋಡೆಗೆ ಅಂಟಿಕೊಂಡಿರುವ ಅಂಧಕಾರವನ್ನು ಶರಣರ ವಿಚಾರಧಾರೆಯ ಮೂಲಕ ದೂರ ಮಾಡಿ ಜಾಗೃತಿ ಮೂಡಿಸುತ್ತಿದೆ ಎಂದರು.
ಕಲ್ಯಾಣ ಕರ್ನಾಟಕದ ಬಹುಮುಖ ಪ್ರತಿಭೆ ಹಾಗೂ ಹಾಸ್ಯ ಕಲಾವಿದ ಬಸವರಾಜ ಮಹಾಮನೆ ಮಾತನಾಡಿ, ಮನುಷ್ಯನಿಗೆ ವಿವೇಕ ಚಿಂತನೆಯ ಜೊತೆಗೆ ಆರೋಗ್ಯವೂ ಮುಖ್ಯ. ಮುಕ್ತವಾದ ನಗು ನಮ್ಮೆಲ್ಲರ ಬಿಗುಮಾನಗಳನ್ನು ಕಿತ್ತುಹಾಕುತ್ತದೆ ಎಂದು ಹಲವು ಹಾಸ್ಯ ಪ್ರಸಂಗಗಳನ್ನು ಹೇಳುವ ಮೂಲಕ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಚೆನ್ನಮಲ್ಲಿಕಾರ್ಜುನ ಗುಂಡಾನೋರ ಹಾಗೂ ಫಜಲುದ್ದೀನ ಖಾಜಿ ಕೆಂಭಾವಿ ಪ್ರಾರ್ಥಿಸಿದರು. ಶ್ರೀಮತಿ ಶೀಲಾದೇವಿ ಓಂಪ್ರಕಾಶ ಮಂಚಲ್ ಸಭೆಯನ್ನು ಉದ್ಘಾಟಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷಣ ಲಾಳಸಂಗಿ ವಂದಿಸಿದರು.
ಸಭೆಯಲ್ಲಿ ಮನೋಹರ ಅಲಬನೂರ, ಲಿಂಗಣ್ಣ ಯಡ್ರಾಮಿ, ಸಾಲೋಮನ್ ಆಲಫ್ರೆಡ್, ಸುರೇಶ ಅರುಣಿ, ಮರೆಪ್ಪ ಅಣಬಿ, ಶಂಕ್ರಪ್ಪ ನಿ. ಅಂಚೆ ಅಧಿಕಾರಿ, ಸಂಗಮೇಶ ಬುಚ್ಚಿನ, ಡಾ. ಬಸವರಾಜ ಇಜೇರಿ, ಡಾ. ಗುರುರಾಜ ಹರನೂರ, ಆನೇಗುಂದಿ ಸಿದ್ದಲಿಂಗಪ್ಪ, ಬಸವರಾಜ ಅರುಣಿ, ಬಸವರಾಜ ಹಾದಿಮನಿ, ದೇವಿಂದ್ರ ಮೇಟಿ, ಡಾ. ಬಸವರಾಜ ಹಾದಿಮನಿ, ರೇಖಾ ಹಾದಿಮನಿ, ಸಿದ್ದರಾಮ ಹೊನ್ಕಲ್ ಸೇರಿದಂತೆ ಡಿ. ದೇವರಾಜ ಅರಸು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



