ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಯುವ ಸಂಗಮ’ 7ನೇ ಹಂತದ ಪೋಸ್ಟರ್ ಬಿಡುಗಡೆ
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆ; ಆ.31ರವರೆಗೆ ನೋಂದಣಿಗೆ ಅವಕಾಶ

ಕಲಬುರಗಿ, ಆ.26: ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ‘ಏಕ್ ಭಾರತ್–ಶ್ರೇಷ್ಠ ಭಾರತ್’ ಯೋಜನೆಯಡಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ಯುವಕರಿಗಾಗಿ ಆಯೋಜಿಸಲಾಗುತ್ತಿರುವ ‘ಯುವ ಸಂಗಮ’ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ 7ನೇ ಹಂತದ ಪೋಸ್ಟರ್ ಅನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಬುಧವಾರ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳು, ದೇಶದ ಯುವಜನತೆಯ ನಡುವೆ ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹಾಗೂ ಪರಸ್ಪರ ತಿಳುವಳಿಕೆಯನ್ನು ಬೆಳೆಸುವುದು ‘ಯುವ ಸಂಗಮ’ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು. ಜೋಡಿ ರಾಜ್ಯಗಳು ಹಾಗೂ ಜೋಡಿ ಶಿಕ್ಷಣ ಸಂಸ್ಥೆಗಳ ನಡುವೆ ನಡೆಯುವ ಪರಸ್ಪರ ಅಧ್ಯಯನ ಮತ್ತು ಪರಿಚಯ ಭೇಟಿಗಳ ಮೂಲಕ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಭಾರತದ ಮೂಲಭೂತ ಮೌಲ್ಯವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಹಾಗೂ ಎನ್‌ಐಟಿ ಸೇರಿದಂತೆ ಒಟ್ಟು 20 ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಈ ಕಾರ್ಯಕ್ರಮದ ನೋಡಲ್ ಸಂಸ್ಥೆಗಳಾಗಿ ಗುರುತಿಸಲಾಗಿದೆ. ಆಯ್ಕೆಯಾಗುವ ಯುವಕರು ಸುಮಾರು 5ರಿಂದ 7 ದಿನಗಳ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಿದ್ದು, ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು, ಶಿಕ್ಷಣ ಸಂಸ್ಥೆಗಳು, ಆಡಳಿತ ವ್ಯವಸ್ಥೆ, ನವೋದ್ಯಮಗಳು, ಕೈಗಾರಿಕೆಗಳು, ಪರಿಸರ ವ್ಯವಸ್ಥೆಗಳು, ಐತಿಹಾಸಿಕ ಹಾಗೂ ಪರಂಪರೆಯ ತಾಣಗಳು ಮತ್ತು ಸಮುದಾಯ ಜೀವನವನ್ನು ಅಧ್ಯಯನ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಜೋಡಿ ಸಂಸ್ಥೆಯಾಗಿ ಮಧ್ಯಪ್ರದೇಶದ ಭೋಪಾಲ್‌ನ ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್ ಆಯ್ಕೆಯಾಗಿದೆ. ಶೀಘ್ರದಲ್ಲೇ ಎಸ್‌ಪಿಎ ಭೋಪಾಲ್‌ನ ವಿದ್ಯಾರ್ಥಿಗಳ ತಂಡ ಕರ್ನಾಟಕಕ್ಕೆ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದೆ. ಈ ವೇಳೆ ಎರಡೂ ರಾಜ್ಯಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
‘ಯುವ ಸಂಗಮ’ಕ್ಕೆ ಆನ್‌ಲೈನ್ ನೋಂದಣಿಗೆ ಆಗಸ್ಟ್ 31 ಕೊನೆಯ ದಿನವಾಗಿದೆ. 18ರಿಂದ 30 ವರ್ಷದೊಳಗಿನ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಹಾಗೂ ಎನ್‌ವೈಕೆಎಸ್ ಸ್ವಯಂಸೇವಕರು ಮತ್ತು ಯುವ ವೃತ್ತಿಪರರು ಅಧಿಕೃತ ‘ಯುವ ಸಂಗಮ’ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಪರಂಪರೆ, ಪ್ರಗತಿ, ಪರಸ್ಪರ ಸಂಪರ್ಕ ಹಾಗೂ ತಂತ್ರಜ್ಞಾನ–ನವೋದ್ಯಮ ಸೇರಿದಂತೆ ಐದು ಪ್ರಮುಖ ವಿಷಯಗಳ ಮೇಲೆ ಗಮನಹರಿಸಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಿಗೆ ಅನುಗುಣವಾಗಿ ಭಾರತದ ಸಾಂಸ್ಕೃತಿಕ, ಭಾಷಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿಯ ವೈವಿಧ್ಯತೆಯನ್ನು ಅರಿತುಕೊಳ್ಳಲು ಯುವಕರಿಗೆ ಅವಕಾಶ ಕಲ್ಪಿಸುವುದರೊಂದಿಗೆ ಪರಸ್ಪರ ತಿಳುವಳಿಕೆ, ರಾಷ್ಟ್ರೀಯ ಏಕತೆ ಮತ್ತು ‘ಏಕ್ ಭಾರತ್–ಶ್ರೇಷ್ಠ ಭಾರತ್’ ಮನೋಭಾವವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು.



