ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಖಂಡಿಸಿ: ನಾಳೆ ಚಿತ್ತಾಪುರದಲ್ಲಿ ರಸ್ತೆ ತಡೆ ಚಳವಳಿ

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಿಗೆ ಅವಮಾನ ಖಂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಬ್ಲಾಕ್ ಕಾಂಗ್ರೆಸ್ ಮನವಿ

ಚಿತ್ತಾಪುರ, ಆ.16: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಮಲೀಲಾ ಮೈದಾನದಲ್ಲಿ ಅವಮಾನ ಮಾಡಿರುವುದನ್ನು ಖಂಡಿಸಿ ಆ.18ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದ್ದಾರೆ.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾಮಲೀಲಾ ಮೈದಾನದಲ್ಲಿ ಭಾಗವಹಿಸಿದ್ದ ಸ್ಥಳವನ್ನು ಆರ್‌ಎಸ್‌ಎಸ್, ವಿಹೆಚ್‌ಪಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗಂಗಾಜಲದ ಮೂಲಕ ಶುದ್ಧೀಕರಿಸಿರುವುದು ಸ್ವಾತಂತ್ರ್ಯೋತ್ತರ ಭಾರತದ ನಾಗರಿಕ ಸಮಾಜಕ್ಕೆ ಮಾಡಿದ ದೊಡ್ಡ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಸ್ವಾತಂತ್ರ್ಯ ಪಡೆದು 80 ವರ್ಷಗಳು ಕಳೆದರೂ ಇಂತಹ ಮನುವಾದಿ ಹಾಗೂ ಅಸಮಾನತೆಯ ಮನೋಭಾವದ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಘಟನೆ ನಡೆದು ಹಲವು ದಿನಗಳು ಕಳೆದರೂ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ತಪ್ಪಿತಸ್ಥರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೀಮಣ್ಣ ಸಾಲಿ ಆಗ್ರಹಿಸಿದರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ಮಾತನಾಡಿ, ದೇಶದ ಹಿರಿಯ ರಾಜಕಾರಣಿ ಹಾಗೂ ಕಳಂಕರಹಿತ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಮಲೀಲಾ ಮೈದಾನದಲ್ಲಿ ಮಾಡಿರುವ ಅವಮಾನ ದೇಶದ ಜನತೆಯ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ಇದನ್ನು ಖಂಡಿಸಿ ಸಮಾನ ಮನಸ್ಕರು ಒಗ್ಗೂಡಿ ರಸ್ತೆ ತಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಖರ್ಗೆ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಯುವ ಅಧ್ಯಕ್ಷ ದೇವೇಂದ್ರ ಯಾಬಾಳ, ನಾಗರೆಡ್ಡಿ ಗೋಪಸೇನ, ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಮುಡಬೂಳಕರ, ದೇವೇಂದ್ರ ಕುಮಸಿ, ನಾಗಯ್ಯ ಗುತೇದಾರ, ಈರಪ್ಪ ಭೋವಿ, ಸಂಜಯ ಬುಳಕರ್, ಭೀಮಸಿಂಗ್ ಚವ್ಹಾಣ, ನಜೀರ್ ಆಡಕಿ, ಸುಭಾಷ ಕಲ್ಮರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button