ರಾಜಕೀಯಸಮಾಜ

ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡನೀಯ: ಸಿದ್ದು ಕೆರೂರ್

ದಲಿತ ಸಮುದಾಯಕ್ಕೆ ಮಾಡಿದ ಅವಮಾನ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಜೇವರ್ಗಿ, ಆ.16: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಬಳಿಕ ಶ್ರೀರಾಮ ಲೀಲಾ ಮೈದಾನವನ್ನು ಗೋಮೂತ್ರ ಹಾಗೂ ಗಂಗಾಜಲದಿಂದ ಶುದ್ಧೀಕರಣ ಮಾಡಿದ ಘಟನೆ ಜಾತಿವಾದಿ ಕೃತ್ಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ತಾಲೂಕು ಸಂಚಾಲಕ ಸಿದ್ದು ಕೆರೂರ್ ತಿಳಿಸಿದ್ದಾರೆ.

ಹಲ್ದ್ವಾನಿಯ ಶ್ರೀರಾಮ ಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿ ಮಾತನಾಡಿದ್ದರು. ಕಾರ್ಯಕ್ರಮ ಮುಗಿದ ತಕ್ಷಣವೇ ಅವರು ಭಾಷಣ ಮಾಡಿದ ವೇದಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಣ ಮಾಡಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಸಿದ್ದು ಕೆರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಸಮುದಾಯದಿಂದ ಬಂದಿರುವ ದೇಶದ ಪ್ರಮುಖ ವಿರೋಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಿಂತು ಮಾತನಾಡಿದ ಸ್ಥಳವನ್ನು ಅಪವಿತ್ರವಾಗಿದೆ ಎಂಬ ಮನೋಭಾವದಿಂದ ಶುದ್ಧೀಕರಣ ಮಾಡಿರುವುದು ಯಾವ ರೀತಿಯ ಮನಸ್ಥಿತಿ ಎಂದು ಅವರು ಪ್ರಶ್ನಿಸಿದ್ದಾರೆ. ಇದು ಸಂವಿಧಾನ, ಮಾನವೀಯತೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆಯ ಆಶಯಗಳಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ. ಇಡೀ ದಲಿತ ಹಾಗೂ ಬಹುಜನ ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತರುವಂತಹ ಕೃತ್ಯವಾಗಿದೆ. 21ನೇ ಶತಮಾನದಲ್ಲಿಯೂ ಇಂತಹ ಅಸ್ಪೃಶ್ಯತಾ ಆಚರಣೆಗಳು ನಡೆಯುತ್ತಿರುವುದು ದೇಶಕ್ಕೆ ದೊಡ್ಡ ಅವಮಾನ ಎಂದು ಸಿದ್ದು ಕೆರೂರ್ ಟೀಕಿಸಿದ್ದಾರೆ.

ಜಾತಿವಾದಿ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಉತ್ತರಾಖಂಡ ಸರ್ಕಾರ ಈ ಘಟನೆಯ ಕುರಿತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button