ರಾಜ್ಯಶಿಕ್ಷಣ

ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ: 101 ಪರಿಶಿಷ್ಟ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ರಾಜ್ಯಮಟ್ಟದ ಐತಿಹಾಸಿಕ ಕಾರ್ಯಾಗಾರ; ಕಲಬುರಗಿ ಜಿಲ್ಲೆಯಿಂದ ನಾಲ್ವರು ಪರಿಶಿಷ್ಟ ಶಿಕ್ಷಕರಿಗೆ ಆಯ್ಕೆ

ಕಲಬುರಗಿ, ಆ.16: ಬೆಂಗಳೂರಿನಲ್ಲಿ ಇದೇ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅದ್ದೂರಿ ಜಯಂತ್ಯುತ್ಸವ, ರಾಜ್ಯಮಟ್ಟದ ಬೃಹತ್ ಐತಿಹಾಸಿಕ ಕಾರ್ಯಾಗಾರ ಹಾಗೂ 101 ಸರ್ಕಾರಿ ಶಿಕ್ಷಕ, ಶಿಕ್ಷಕಿಯರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಸುಂಟಾಣ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ 101 ಶಿಕ್ಷಕ-ಶಿಕ್ಷಕಿಯರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಬುರಗಿ ಜಿಲ್ಲೆಯಿಂದ ನಾಲ್ವರು ಪರಿಶಿಷ್ಟ ಶಿಕ್ಷಕಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಸಂಘದ ಸದಸ್ಯತ್ವ ಅಭಿಯಾನ ಆರಂಭಗೊಂಡಿದ್ದು, ಆಯಾ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಶಿಕ್ಷಕರು ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು. ಪರಿಶಿಷ್ಟ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸಂಘದ ರಾಜ್ಯಾಧ್ಯಕ್ಷ ಡಾ. ವಿ.ಟಿ. ವೆಂಕಟೇಶ್ವರಯ್ಯ ಅವರ ನೇತೃತ್ವದಲ್ಲಿ 2007ರಿಂದ ಸಂಘ ಕಾರ್ಯನಿರ್ವಹಿಸುತ್ತಿದ್ದು, ಪರಿಶಿಷ್ಟ ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಶಿಕ್ಷಣದಿಂದ ವಂಚಿತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವುದು, ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ಹಾಗೂ ಹೋರಾಟಗಳನ್ನು ಸಂಘ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

2026ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ 101 ಸಾಧಕ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಿ ರಾಜ್ಯಮಟ್ಟದ ಗೌರವ ನೀಡಲಾಗುತ್ತಿದೆ. ಇದೇ ವೇಳೆ 2026ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಅನಿಲ್‌ಕುಮಾರ್ ಸುಂಟಾಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾದೇವ ಮಾಲಿಪಾಟೀಲ್, ರವಿಕುಮಾರ್ ಹಾದಿಮನಿ, ಪರಮೇಶ್ವರ ಗಂಜಗೇರಿ, ರವೀಂದ್ರನಾಥ ಮೊಘಾ, ಶಶಿಕಲಾ, ವರ್ಷಾತಾಯಿ, ಸುದರ್ಶನ ಸೋನೆ, ಮುರುಳೀಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button