ಗ್ರಾಮ ಪಂಚಾಯಿತಿ ನೌಕರರ ಪದೋನ್ನತಿ ತಾತ್ಕಾಲಿಕ ಪಟ್ಟಿಗೆ ವಿರೋಧ: ಮಾದಿಗ ಸಮಾಜದಿಂದ ಜಿಲ್ಲಾ ಪಂಚಾಯಿತಿ ಎದುರು ಧರಣಿ
ಹಳೆಯ ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸುವಂತೆ ಆಗ್ರಹ; ಅಕ್ರಮ ನೇಮಕಾತಿ ನಡೆದರೆ ಕಾನೂನು ಹೋರಾಟದ ಎಚ್ಚರಿಕೆ

ಕಲಬುರಗಿ, ಜು.28: ಗ್ರಾಮ ಪಂಚಾಯಿತಿ ಕರವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಪದೋನ್ನತಿಗಾಗಿ ಸಿದ್ಧಪಡಿಸಿರುವ ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿಸಿ, ಹೊಸ ಅಧಿಸೂಚನೆ ಹೊರಡಿಸಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.
ಸಮಿತಿಯ ರಾಜ್ಯಾಧ್ಯಕ್ಷ ಪ್ರಭಾಕರ್ ಹದನೂರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಾಧ್ಯಕ್ಷ ಚಂದ್ರಕಾಂತ ಸಾಗರಕರ್, ಸಿದ್ರಾಮ ಹೊಸಮನಿ ಸೇರಿದಂತೆ ಹಲವರು ಭಾಗವಹಿಸಿದರು. ಬಳಿಕ ಪ್ರತಿಭಟನಾಕಾರರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿಯಲ್ಲಿ, ಉಪ ಕಾರ್ಯದರ್ಶಿಯವರ ವಿರುದ್ಧ ಈಗಾಗಲೇ ಹಲವು ಸಂಘಟನೆಗಳು ದೂರು ಸಲ್ಲಿಸಿದ್ದು, ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರಕ್ಕೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಆರೋಪಿಸಿದರು. ರಾಜಕೀಯ ಪ್ರಭಾವದಿಂದ ಅಧಿಕಾರಿಗಳು ರಕ್ಷಣೆ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪದೋನ್ನತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸದೆ ತಯಾರಿಸಿರುವ ತಾತ್ಕಾಲಿಕ ಪಟ್ಟಿಯನ್ನು ತಕ್ಷಣ ರದ್ದುಪಡಿಸಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಹೊಸ ಅಧಿಸೂಚನೆ ಹೊರಡಿಸಿ ಮೀಸಲಾತಿ ನಿಯಮಗಳನ್ನು ಅನುಸರಿಸಿ ಎರಡು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹಳೆಯ ದೋಷಪೂರಿತ ಪಟ್ಟಿಯನ್ನೇ ಆಧರಿಸಿ ಪದೋನ್ನತಿ ನೀಡುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸರ್ಕಾರದ ಆದೇಶದಂತೆ ಹೊಸ ಅಧಿಸೂಚನೆ ಹೊರಡಿಸಿ, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಡಿಪಿಸಿ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸದೇ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಿರುವುದನ್ನೂ ಪ್ರಶ್ನಿಸಿದ ಅವರು, ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಇಚ್ಛಾ ಪ್ರಮಾಣ ಪತ್ರಗಳನ್ನು ಪಡೆಯಲಾಗಿದೆ ಎಂದು ಆರೋಪಿಸಿದರು. ಸರ್ಕಾರದ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನೇಮಕಾತಿ ನಡೆಸುವಂತೆ ಒತ್ತಾಯಿಸಿದರು.
ಇದಲ್ಲದೆ, ನೇಮಕಾತಿ ಪ್ರಾಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕು, ಮೃತ ನೌಕರರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಎರಡು ವರ್ಷಗಳಿಂದ ವಿಳಂಬವಾಗಿರುವ ನೇಮಕಾತಿ ಪ್ರಕ್ರಿಯೆಗೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಸರ್ಕಾರದ ಅನುಮೋದನೆಯಿಲ್ಲದೆ ಹಳೆಯ ತಾತ್ಕಾಲಿಕ ಪಟ್ಟಿಯ ಆಧಾರದ ಮೇಲೆ ಪದೋನ್ನತಿ ಆದೇಶ ಹೊರಡಿಸಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.



