ರಾಜಾಪುರದಲ್ಲಿ ₹90.02 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ
ಗ್ರಂಥಾಲಯ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಭೂಮಿ ಪೂಜೆ; ಸಾರ್ವಜನಿಕರಿಗೆ ಮೂಲಸೌಕರ್ಯ ವಿಸ್ತರಣೆಗೆ ಒತ್ತು.

ಕಲಬುರಗಿ, ಜು.27: ನಗರದ ರಾಜಾಪುರ ವಾರ್ಡ್ ಸಂಖ್ಯೆ 47ರಲ್ಲಿ ಒಟ್ಟು ₹90.02 ಲಕ್ಷ ವೆಚ್ಚದ ಮೂರು ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
2025-26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿ ₹20.02 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದೇ ವೇಳೆ, 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ 12 ಜ್ಯೋತಿರ್ಲಿಂಗ ದೇವಸ್ಥಾನದ ಸಮೀಪ ₹25 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಹಾಗೂ ₹45 ಲಕ್ಷ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಶಾಸಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ಕಾಮಗಾರಿಗಳು ಪೂರ್ಣಗೊಂಡ ಬಳಿಕ ರಾಜಾಪುರ ಭಾಗದ ಸಾರ್ವಜನಿಕರಿಗೆ ಶಿಕ್ಷಣ, ಸಾಮಾಜಿಕ ಹಾಗೂ ಸಮುದಾಯ ಚಟುವಟಿಕೆಗಳಿಗೆ ಅಗತ್ಯ ಮೂಲಸೌಕರ್ಯ ಲಭ್ಯವಾಗಲಿದ್ದು, ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸುರೇಶ್ ಜಾದವ್, ಚಂದ್ರಶೇಖರ ಹಾವೇರಿ, ಮಾಂತಪ್ಪ ಸಂಗಾವಿ, ಶಿವಲಿಂಗಪ್ಪ ಜಂಕನಹಳ್ಳಿ, ಸಿದ್ದು ಹಿರೇಮಠ, ಮಾಜಿ ಮೇಯರ್ ರವಿ ಹುಣ್ಣಳ್ಳಿ, ರಾಹುಲ್ ಹುಣ್ಣಳ್ಳಿ, ಸೂರ್ಯಕಾಂತ್ ನೀಲೂರ, ಮಲ್ಲಿಕಾರ್ಜುನ ಕನ್ವರ್‌ಕರ, ಕಿರಣ್ ವಾಲೀಕರ್, ಪ್ರಶಾಂತ್ ಕಾಂತಿ ಸೇರಿದಂತೆ ಸ್ಥಳೀಯ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



