ಜೇವರ್ಗಿ ಟೆಂಡರ್ ಅವ್ಯವಹಾರ ತನಿಖೆಗೆ ಆಗ್ರಹ: ಮರು ಟೆಂಡರ್‌ಗೆ ಬಿಜೆಪಿ ಒತ್ತಾಯ

ಕಲಬುರಗಿ, ಜೂ. 30: ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಮಾಜಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂಬಂಧಪಟ್ಟ ಟೆಂಡರ್‌ಗಳನ್ನು ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020–26ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಕೃಷಿ ಇಲಾಖೆ, ಗ್ರಾಮೀಣ ಕುಡಿಯುವ ನೀರು, ಜಲಜೀವನ್ ಮಿಷನ್ ಹಾಗೂ ಭೂಸೇನಾ ನಿಗಮದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದರು.
ಅರ್ಹ ಗುತ್ತಿಗೆದಾರರನ್ನು ಕಡೆಗಣಿಸಿ ಅನರ್ಹರಿಗೆ ಕಾಮಗಾರಿಗಳನ್ನು ನೀಡಲಾಗಿದೆ. ಇದರಿಂದ ಸರ್ಕಾರದ ಹಣ ದುರುಪಯೋಗವಾಗುವುದರ ಜೊತೆಗೆ ಗುಣಮಟ್ಟದ ಕಾಮಗಾರಿಗಳಿಗೂ ಧಕ್ಕೆ ಉಂಟಾಗಿದೆ ಎಂದು ಅವರು ದೂರಿದರು.
ಹುಲ್ಲೂರು–ನಾರಾಯಣಪುರ, ಕೆಲ್ಲೂರು–ಹಾಲಗಡ್ಲಾ, ನೇದಲಗಿ–ಹಾಲಘಟ್ಟರಗಾ, ಜಮಖಂಡಿ–ಪಡದಳ್ಳಿ, ಕಲ್ಲೂರು (ಕೆ)–ಮಾವನೂರು, ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ಸರ್ಕಲ್–ಸಂಪತ್ ಮಹಾಲಕ್ಷ್ಮಿ, ನೆಲೋಗಿ–ಗೌನಳ್ಳಿ–ಹರವಾಳ ಹಾಗೂ ಜೇವರ್ಗಿ–ನರಿಬೋಳ್ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳ ಸುಮಾರು ₹5.03 ಕೋಟಿ ಮೊತ್ತದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ಈ ಎಲ್ಲ ಟೆಂಡರ್‌ಗಳನ್ನು ರದ್ದುಪಡಿಸಿ ಪಾರದರ್ಶಕವಾಗಿ ಮರು ಟೆಂಡರ್ ಪ್ರಕ್ರಿಯೆ ನಡೆಸಬೇಕು. ಜೊತೆಗೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜೇವರ್ಗಿ ಕ್ಷೇತ್ರದ ವಿವಿಧ ಇಲಾಖೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ ಸಿಬ್ಬಂದಿ ಕೊರತೆಯ ನೆಪ ಹೇಳಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬದಲು ಲೂಟಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಹೋರಾಟ ರೂಪಿಸಲಿದೆ ಎಂದು ಶಿವರಾಜ್ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಣ್ಣ ಇಟಗಾ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.



