ಜಿಲ್ಲಾಸುದ್ದಿ

ಕಲಬುರಗಿ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಸ್ಥಿತಿಗತಿ ಅವಲೋಕನ

ಕಲಬುರಗಿ,ಜೂ.27- ಮುಂಗಾರು ಮಳೆ ಕೈಕೊಟ್ಟ ಕಾರಣ ನಗರದಲ್ಲಿನ ಕುಡಿಯುವ ನೀರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಬು ಪಾಟೀಲ ಅವರು ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಉಪ ಮೇಯರ್ ತೃಪ್ತಿ ಲಾಖೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರೊಂದಿಗೆ ಶನಿವಾರ ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸರಡಗಿ ಬ್ರಿಡ್ಜ್ ಕಂ ಬ್ಯಾರೇಜಿಗೆ ಭೇಟಿ ನೀಡಿ ಪ್ರಸ್ತುತ ಲಭ್ಯ ಇರುವ ನೀರಿನ ಪ್ರಮಾಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ‌ ಶಾಸಕ‌ ಅಲ್ಲಮಪ್ರಭು ಪಾಟೀಲ ಅವರು, ಈ ಬಾರಿ ಮಳೆ ಕೈಕೊಟ್ಟ ಕಾರಣ ನಗರದಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಉಂಟಾಗಿದೆ. ಹೀಗಾಗಿ ಈಗಾಗಲೆ ನಾರಾಯಣಪುರ ಜಲಾಶಯದಿಂದ 0.5 ಟಿ.ಎಂ.ಸಿ. ನೀರು ಹರಿಬಿಡಲಾಗಿದ್ದು, ರವಿವಾರ ಅಥವಾ ಸೋಮವಾರ ಸರಡಗಿ ಬ್ಯಾರೇಜಿಗೆ ತಲುಪಲಿದೆ ಎಂದರು.

ಪ್ರತಿ ವರ್ಷ ಬೇಸಿಗೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದ್ದು, ನಾರಾಯಣಪುರ ಜಲಾಶಯದಿಂದ‌ ಶಹಾಪುರ, ನಗನೂರ ಮಾರ್ಗವಾಗಿ ಹರಿಬಿಡುವ ನೀರು ನಮ್ಮಲ್ಲಿ ಬರುವಷ್ಟಿಗೆ ಹೆಚ್ಚಿನ ನೀರು ಭೂಮಿ ಪಾಲಾಗುತ್ತಿದೆ. ಇದರ ಬದಲಾಗಿ ನಾರಾಯಣಪುರದಿಂದ ನೇರವಾಗಿ ಸರಡಗಿಗೆ ನೀರು ಹರಿಸಿದಲ್ಲಿ ಹೆಚ್ಚಿನ ನೀರು ನಮಗೆ ಸಿಗಲಿದೆ. ಇದಕ್ಕಾಗಿ 1,850 ಕೋಟಿ ರೂ. ಮೊತ್ತದ ಡಿ‌.ಪಿ.ಆರ್ ಸಿದ್ದಪಡಿಸಿದ್ದು, ಅಂದುಕೊಂಡಂತೆ ಯೋಜನೆ ಅನುಷ್ಟಾನಕ್ಕೆ ಬಂದಲ್ಲಿ ಮುಂದಿನ‌ ದಿನದಲ್ಲಿ ನಗರಕ್ಕೆ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಇನ್ನು ಸರಡಗಿ ಬ್ಯಾರೇಜಿನಲ್ಲಿ 41 ವರ್ಷ ಹಳೆಯದ 900ಕ್ಕೂ ಹೆಚ್ಚಿನ ಸ್ಟಾಪ್ ಲಾಗ್ ಗೇಟ್ ಗಳಿದ್ದು, ಇದರಲ್ಲಿ ಈಗಾಗಲೆ 600 ಹೊಸದಾಗಿ ಗೇಟ್ ಅಳವಡಿಸಿದೆ. 150 ದುರಸ್ತಿ ಮಾಡಿದ್ದು, ಇನ್ನುಳಿದ ಗೇಟ್ ಸಹ ಹೊಸದಾಗಿ ಅಳವಡಿಸಿ ಬೇಸಿಗೆಯಲ್ಲಿ ನೀರು ಪೋಲಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಇದಲ್ಲದೆ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಹೆಚ್ಚಿನ‌ ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸಲು ಬ್ಯಾರೇಜ್ ನಲ್ಲಿ ಹೂಳೆತ್ತುವ ಕಾಮಗಾರಿ ಸಹ ನಡೆಯುತ್ತಿದ್ದು, ಇವೆಲ್ಲ ಕೆಲಸ ಕಾರ್ಯಗಳಿಗೆ 5 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ಶುದ್ಧ ಕುಡಿಯುವ ನೀರು ನಗರದ ಜನರಿಗೆ ಲಭ್ಯವಾಗಲಿದೆ ಎಂದರು.

ಇನ್ನು ಕಲಬುರಗಿ ಮಹಾನಗರದಲ್ಲಿ ಎಲ್ & ಟಿ ಸಂಸ್ಥೆಯಿಂದ 24 ಗಂಟೆ‌ ನಿರಂತರ ಕುಡಿಯುವ ನೀರು ಪೂರೈಕೆ ಸ್ಕೀಮ್ ‘ಎ’ ಯೋಜನೆಯಡಿ 700 ಕಿ.ಮೀ ಪೈಪ್ ಲೈನ್ ಕಾಮಗಾರಿ ನಡೆದಿದ್ದು, ‘ಬಿ’ ಸ್ಕೀಮ್ ನಲ್ಲಿ ಇನ್ನು 500 ಕಿ.ಮೀ ವಿಸ್ತರಣೆ ಮಾಡಲಾಗುತ್ತಿದೆ. ಇದರಿಂದ ನಗರದಾದ್ಯಂತ ನೀರು ಸರಬರಾಜು ಜಾಲ ವಿಸ್ತರಣೆಯಾಗಲಿದೆ. ಪ್ರಸ್ತುತ ಕಲಬುರಗಿ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಎಲ್ಲಿಯೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಲ್ಲಿ ಕೂಡಲೆ ನೀರು ಪೂರೈಕೆಗೆ
ಸುಮಾರು‌ 200 ಟ್ಯಾಂಕರ್ ಪಡೆಯಲು ಸಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲಾ‌ ಮುನ್ನೆಚ್ಚರಿಕೆ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದರು.

8 ದಿನಕ್ಕೆ ನೀರು ಲಭ್ಯ:

ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ ಪ್ರಸ್ತುತ ಕಲಬುರಗಿ ನಗರಕ್ಕೆ ಮುಂದಿನ 8-10 ದಿನಗಳ ಕಾಲ ನೀರು ಪೂರೈಕೆಗೆ ನೀರಿನ ಪ್ರಮಾಣ ಲಭ್ಯ ಇದೆ. ನಾರಾಯಣಪುರ ಜಲಾಶಯದಿಂದ ನೀರು ಹರಿಬಿಟ್ಟಿದ್ದು, ಒಂದೆರಡು ದಿನ‌ ಬ್ಯಾರೇಜಿಗೆ ನೀರು ಬಂದು ಸೇರಲಿದ್ದು, ಅಲ್ಲಿಗೆ ಸದ್ಯದ ಮಟ್ಟಿಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಕಳೆದ ವರ್ಷ ಅತಿವೃಷ್ಠಿ, ಈ ವರ್ಷ ಒಂದು ತಿಂಗಳು ಕಳೆದರು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಪೂರೈಕೆ ನಮಗೆ ಸವಾಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಒಂದೆರಡು‌ ದಿನದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ವರುಣನ ಆಗಮನಕ್ಕೆ ಕಾತುರರಾಗಿದ್ದೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕಲಬುರಗಿ ಮಹಾನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಚರಂಡಿ ನೀರು ಸೇರದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ‌ ಸೂಚನೆ ನೀಡಲಾಗಿದೆ. ರಸ್ತೆ, ಬಿ.ಎಸ್.ಎನ್.ಎಲ್., ವಿದ್ಯುತ್ ಕಾಮಗಾರಿ ಕೈಗೊಳ್ಳುವವರಿಗೂ ರಸ್ತೆ ನಿರ್ಮಾಣ ಮಾಡುವ ಮುನ್ನವೆ ಇವೆಲ್ಲ ಕೆಲಸಗಳನ್ನು, ದುರಸ್ತಿ ಕಾರ್ಯಗಳನ್ನು ಮಾಡಿಕೊಳ್ಳುವಂತೆ ಅನಗತ್ಯ ರಸ್ತೆ ತೋಡುವುದನ್ನು ತಡೆಯಲು ಸೂಚಿಸಲಾಗಿದೆ. ಎನ್.ಎಂ.ಪಿ.ಸಿ, 15ನೇ ಹಣಕಾಸು ಯೋಜನೆಯಡಿ ಬೇಡಿಕೆ ಇದ್ದ ಕಡೆ 60-70 ಬೋರವೆಲ್ ಕೊರೆಯಲು ಸಹ ಯೋಜನೆ ರೂಪಿಸಿದೆ ಎಂದು ಅವಿನಾಶ ಶಿಂಧೆ ತಿಳಿಸಿದರು.

ಕೆ.ಯು.ಐ.ಡಿ.ಎಫ್.ಸಿ ಅಧೀಕ್ಷಕ ಅಭಿಯಂತ ಆರ್.ಪಿ.ಜಾಧವ, ಸಣ್ಣ ಮತ್ತು ಮಧ್ಯಮ‌ ನೀರಾವರಿ ಯೋಜನೆ ಇಲಾಖೆಯ ಎ.ಇ.ಇ. ರಾಜಶೇಖರ‌ ಸಜ್ಜನಶೆಟ್ಟಿ ಸೇರಿದಂತೆ ಇತರೆ ಅಧಿಕಾರಿಳಿದ್ದರು.

Related Articles

Leave a Reply

Your email address will not be published. Required fields are marked *

Back to top button