ರಾಜಕೀಯ

ಆಳಂದದಲ್ಲಿ ಇಂದು ಶಾಸಕ ಬಿ.ಆರ್. ಪಾಟೀಲ್ ಬೆಂಬಲಿಗರ ಸಭೆ

ಸಚಿವ ಸ್ಥಾನ ವಂಚನೆ ಹಿನ್ನೆಲೆ ರಾಜಕೀಯ ನಡೆ ಬಗ್ಗೆ ಕುತೂಹಲ; ಮುಂದಿನ ಹಾದಿ ಕುರಿತು ಮಹತ್ವದ ಚರ್ಚೆ ಸಾಧ್ಯತೆ

ಆಳಂದ, ಆ.7: ಸಚಿವ ಸ್ಥಾನದಿಂದ ವಂಚಿತರಾಗಿರುವ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅವರ ಮುಂದಿನ ರಾಜಕೀಯ ನಡೆ ಕುರಿತು ತೀವ್ರ ಕುತೂಹಲ ಮೂಡಿರುವ ಹಿನ್ನೆಲೆ, ಶನಿವಾರ (ಆಗಸ್ಟ್‌ 8) ಬೆಳಿಗ್ಗೆ 11 ಗಂಟೆಗೆ ಆಳಂದ ಪಟ್ಟಣದಲ್ಲಿ ಅವರ ಬೆಂಬಲಿಗರ ಮಹತ್ವದ ಸಭೆ ನಡೆಯಲಿದೆ.

ಶಾಸಕ ಬಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕ್ಷೇತ್ರದ ಮುಂದಿನ ರಾಜಕೀಯ ಬೆಳವಣಿಗೆಗಳು, ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ವಿವಿಧ ಸಮಕಾಲೀನ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯ ಎಲ್ಲ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.

ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಬಿ.ಆರ್. ಪಾಟೀಲ್ ಅವರು ಈಗಾಗಲೇ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಶಾಸಕ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಉನ್ನತ ನಾಯಕತ್ವದಿಂದ ಸಚಿವ ಸ್ಥಾನ ನೀಡುವ ಕುರಿತು ಹಲವು ಬಾರಿ ಭರವಸೆ ನೀಡಲಾಗಿದ್ದರೂ ಅದು ಈಡೇರದಿರುವುದರಿಂದ ಶಾಸಕ ಹಾಗೂ ಅವರ ಬೆಂಬಲಿಗರಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಶನಿವಾರ ನಡೆಯಲಿರುವ ಬೆಂಬಲಿಗರ ಸಭೆಗೆ ರಾಜಕೀಯ ವಲಯದಲ್ಲಿ ವಿಶೇಷ ಮಹತ್ವ ದೊರೆತಿದ್ದು, ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳತ್ತ ಎಲ್ಲರ ಗಮನ ನೆಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button