ಜಗಪಾಲ್ ಸಿಂಗ್ ಪವಾರ್ ಪುಣ್ಯಸ್ಮರಣೆ ಅಂಗವಾಗಿ ಇಂದು ಜೆಎಸ್ಪಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ
ಪಂಡಿತ ರಾಮುಲು ಗಾದಗಿ ಅವರಿಗೆ ಜೆಎಸ್ಪಿ ಪ್ರಶಸ್ತಿ-2026; ಸಂಜೆ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಸಂಗೀತ ರಸದೌತಣ.

ಬೀದರ್, ಜು. 31: ಸಂಗೀತ ಕಲಾ ಮಂಡಳ, ಬೀದರ್ ವತಿಯಿಂದ ಸಂಸ್ಥಾಪಕರಾದ ದಿವಂಗತ ಜಗಪಾಲ್ ಸಿಂಗ್ ಪವಾರ್ ಅವರ 26ನೇ ವಾರ್ಷಿಕ ಪುಣ್ಯಸ್ಮರಣೆ ಅಂಗವಾಗಿ ಜೆಎಸ್ಪಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಗೀತೋತ್ಸವವನ್ನು ಆಗಸ್ಟ್ 1ರಂದು ಸಂಜೆ 4.30ಕ್ಕೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಗೀತ ಕಲಾ ಮಂಡಳದ ಅಧ್ಯಕ್ಷ ರಾಜೇಂದ್ರ ಸಿಂಗ್ ಪವಾರ್, ಉಪಾಧ್ಯಕ್ಷ ರಮೇಶ್ ಗೋಯಲ್ ಹಾಗೂ ಕಾರ್ಯದರ್ಶಿ ಎಸ್.ಆರ್. ಸಂಗಮಕರ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಾರೂತಿರಾವ್ ಮೂಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರೀನ್ ಮತ್ತು ಸೀಡ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಹಾಗೂ ನೂಪುರ ನೃತ್ಯ ಅಕಾಡೆಮಿಯ ಶ್ರೀಮತಿ ಉಷಾ ಪ್ರಭಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ವರ್ಷದ ಜೆಎಸ್ಪಿ ಪ್ರಶಸ್ತಿ-2026ಯನ್ನು ಹಿರಿಯ ಕಲಾವಿದ ಪಂಡಿತ ರಾಮುಲು ಗಾದಗಿ ಅವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ವಿಶಾರದ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಕು. ಶಿವಾನಿ ಸ್ವಾಮಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಲದ್ದೆ ಹಾಗೂ ಶಿವರಾಜ ಕಾಳಶೆಟ್ಟಿ ನಿರೂಪಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸಂಗೀತ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4.30ಕ್ಕೆ ಮಾಸ್ಟರ್ ವಿಶ್ವ ಎಸ್. ಬಿರಾದಾರ, ಸಂಜೆ 5 ಗಂಟೆಗೆ ಪಂಡಿತ ಜಯತೀರ್ಥ ಮೆಹುಂಡಿ (ಹುಬ್ಬಳ್ಳಿ) ಹಾಗೂ ರಾತ್ರಿ 8 ಗಂಟೆಗೆ ಪಂಡಿತ ರಾಮುಲು ಗಾದಗಿ ಅವರ ಗಾಯನ ಕಾರ್ಯಕ್ರಮ ನಡೆಯಲಿದೆ. ಕೃಷ್ಣ ಮುಖೇಡಕರ ಹಾಗೂ ಬೀದರ್ನ ಕಲಾವಿದರು ಹಾರ್ಮೋನಿಯಂ ಮತ್ತು ಇತರ ವಾದ್ಯಗಳ ಸಹಕಾರ ನೀಡಲಿದ್ದಾರೆ.
ಸಂಗೀತಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಗೀತ ಕಲಾ ಮಂಡಳದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.



