ಜಿಲ್ಲಾಸುದ್ದಿ

ಕಲಬುರ್ಗಿಯಲ್ಲಿ ಜುಲೈ ೧೨ರಂದು ವಚನ ಗಾಯನ ಸ್ಪರ್ಧೆ

ಕಲಬುರ್ಗಿ, ಜು.೩- ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿರುವ ಮರಾಠಾ ಸಾಹಿತ್ಯ ಮಂಡಳದಲ್ಲಿ ಇದೇ ಜುಲೈ ೧೨ರಂದು ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ವಚನ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಪಂಡಿತ ಡಿ.ವಿ. ಪುಲಸ್ಕರ್ ಸಂಗೀತ, ಸಾಹಿತ್ಯ ಕಲಾ ಸಂಸ್ಥೆಯ ಸಿದ್ದಾರ್ಥ ಚಿಮ್ಮಾಯಿದ್ಲಾಯಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೀಂದ್ರಪ್ಪ ಜಿ. ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆಸಂಯುಕ್ತ ಆಶ್ರಯದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹಾಗೂ ಬಸವಣ್ಣನವರ ಮತ್ತು ಶರಣರ ವಚನ ಸಾಹಿತ್ಯವನ್ನು ಸಂಗೀತದ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಚನಗಳು ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ಸಂಪತ್ತು. ಇಂದಿನ ಯುವಜನತೆಯಲ್ಲಿ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದು, ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವುದು ಹಾಗೂ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ಸ್ಪರ್ಧೆಯಲ್ಲಿ ೧೨ರಿಂದ ೧೮ ವರ್ಷದೊಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ಹಾರ್ಮೋನಿಯಂ, ತಬಲ ಹಾಗೂ ತಂಬೂರಿ ವಾದ್ಯಗಳ ಸಹಾಯದಿಂದ ವಚನ ಗಾಯನವನ್ನು ಪ್ರಸ್ತುತಪಡಿಸಬಹುದು. ಸ್ಪರ್ಧೆಯಲ್ಲಿ ಗಾಯನದ ಶುದ್ಧತೆ, ರಾಗ-ತಾಳದ ಅರಿವು, ಉಚ್ಛಾರಣೆ, ಭಾವಾಭಿವ್ಯಕ್ತಿ ಹಾಗೂ ವೇದಿಕೆ ನಿರ್ವಹಣೆಯನ್ನು ಪರಿಣಿತ ತೀರ್ಪುಗಾರರು ಮೌಲ್ಯಮಾಪನ ಮಾಡಲಿದ್ದಾರೆ. ವಿಜೇತರಿಗೆ ನಗದು ಬಹುಮಾನ, ಆಕರ್ಷಕ ಟ್ರೋಫಿ ಹಾಗೂ ಪ್ರಶಂಸಾ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಭಾಗವಹಿಸಿದ ಪ್ರಮಾಣಪತ್ರ ನೀಡುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.

ಸ್ಪರ್ಧೆ ಕೇವಲ ಬಹುಮಾನಕ್ಕಾಗಿ ಅಲ್ಲ; ವಚನ ಸಾಹಿತ್ಯವನ್ನು ಯುವಜನತೆಯ ಮನಸ್ಸಿನಲ್ಲಿ ಬಿತ್ತುವ ಒಂದು ಸಾಂಸ್ಕೃತಿಕ ಚಳುವಳಿಯಾಗಿದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಸಂಗೀತ ವಿದ್ಯಾರ್ಥಿಗಳು, ಪೋಷಕರು, ಸಂಗೀತ ಶಿಕ್ಷಕರು ಹಾಗೂ ಸಾಂಸ್ಕೃತಿಕ ಸಂಘಟನೆಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಡಾ. ನಾಗರಾಜ್ ಪುರಮಕರ್, ಯಲ್ಲಾಲಿಂಗ ಡಾಂಗೆ, ಸಿದ್ದಲಿಂಗ ಮಾಹುರ್ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button