ಬೇಡಿಕೆಗಳ ಈಡೇರಿಕೆಗೆ ಸ್ಕೀಮ್ ನೌಕರರ ಕರಾಳ ದಿನಾಚರಣೆ: ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ವೇತನ ಹೆಚ್ಚಳ, ಉದ್ಯೋಗ ಭದ್ರತೆ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸರ್ಕಾರದ ಗಮನ ಸೆಳೆಯಲು ಮುಷ್ಕರ; ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ

ಕಲಬುರಗಿ, ಜು.10: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಕೀಮ್ ನೌಕರರು ಶುಕ್ರವಾರ ಕರಾಳ ದಿನಾಚರಣೆ ಅಂಗವಾಗಿ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರಮ್ಮ ಪಾಟೀಲ್, ರಾಜಮ್ಮ ಪಾಟೀಲ್, ಮಹಾದೇವಿ ಪೋಲಕಪಳ್ಳಿ, ದೇವಮ್ಮ ಚಿತ್ತಾಪುರ, ರತ್ನಮ್ಮ, ವಿಜಯಲಕ್ಷ್ಮಿ ಹಿರೇಮಠ್, ಎಂ.ಬಿ. ಸಜ್ಜನ್ ಸೇರಿದಂತೆ ಹಲವು ನೌಕರರು ಭಾಗವಹಿಸಿದರು.
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸರ್ಕಾರಿ ಶಾಲೆಗಳ ‘ಅಕ್ಷರ ದಾಸೋಹ’ ಯೋಜನೆಗೆ 25 ವರ್ಷಗಳಾಗಿದ್ದರೂ ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹಾಗೂ ನೌಕರರ ವೇತನ ಹೆಚ್ಚಳವಾಗಿಲ್ಲ ಎಂದು ಆರೋಪಿಸಿದರು. ಖಾಸಗಿ ಸಂಸ್ಥೆಗಳಿಗೆ ಯೋಜನೆಯ ಜವಾಬ್ದಾರಿ ನೀಡುವ ಮೂಲಕ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2008ರಿಂದ ಬಿಸಿಯೂಟ ನೌಕರರ ವೇತನ ಹೆಚ್ಚಳವಾಗಿಲ್ಲ. ಚುನಾವಣಾ ಭರವಸೆಯಂತೆ ಮಾಸಿಕ ₹7,000ರವರೆಗೆ ವೇತನ ಹೆಚ್ಚಳ ಮಾಡಬೇಕು ಹಾಗೂ ಇಸ್ಕಾನ್‌ಗೆ ಬಿಸಿಯೂಟ ವಹಿಸುವ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು. ಆರೋಗ್ಯ ವಿಮೆ ಜಾರಿಗೊಳಿಸುವುದು, ಕೆಲಸದ ಅವಧಿಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸುವುದು ಹಾಗೂ ಜಂಟಿ ಖಾತೆ ನಿರ್ವಹಣೆಯ ಹಿಂದಿನ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಕೆಪಿಎಸ್ ಶಾಲೆಗಳು, ಇಸ್ಕಾನ್, ಮಠಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಬಿಸಿಯೂಟ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು, ನಿವೃತ್ತ ನೌಕರರಿಗೆ ಮಾಸಿಕ ₹10 ಸಾವಿರ ಪಿಂಚಣಿ ಜಾರಿಗೊಳಿಸಬೇಕು ಹಾಗೂ ಎಲ್ಲ ಜಿಲ್ಲೆಗಳಲ್ಲೂ ನಿವೃತ್ತಿ ಸೌಲಭ್ಯಗಳನ್ನು ತಕ್ಷಣ ನೀಡಬೇಕು ಎಂದು ಮನವಿ ಮಾಡಿದರು.
ಅಡುಗೆ ಕೇಂದ್ರಗಳನ್ನು ಸುಸಜ್ಜಿತಗೊಳಿಸುವುದು, ಶಾಲೆಗಳಲ್ಲಿ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿಯನ್ನು ನೇಮಿಸುವುದು, ಶಾಲಾ ಸ್ವಚ್ಛತೆ ಹಾಗೂ ಕೈತೋಟ ನಿರ್ವಹಣೆಯಂತಹ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಿ ಶಾಲಾ ಸಿಬ್ಬಂದಿಯ ಸ್ಥಾನಮಾನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಅಪಘಾತದಲ್ಲಿ ಮೃತಪಟ್ಟ ಅಡುಗೆ ಸಿಬ್ಬಂದಿಯ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದುಹಾಕುವ ಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.



